Home » ಚೈತ್ರಾ ಮತ್ತೊಂದು ವಂಚನೆ ಪ್ರಕರಣ
 

ಚೈತ್ರಾ ಮತ್ತೊಂದು ವಂಚನೆ ಪ್ರಕರಣ

ಐದು ಲಕ್ಷ ವಂಚಿಸಿದ ಚೈತ್ರಾ

by Kundapur Xpress
Spread the love

ಉಡುಪಿ : ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಬಿಜೆಪಿ ಎಮ್ ಎಲ್ ಎ ಟಿಕೇಟ್ ನೀಡುವುದಾಗಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣದ ಬೆನ್ನಲ್ಲೇ ಚೈತ್ರಾ ಕುಂದಾಪುರ ಇನ್ನೋರ್ವ ವ್ಯಕ್ತಿಗೆ ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕೋಟದ ವ್ಯಕ್ತಿಯೋರ್ವರಿಗೆ ಬಟ್ಟೆ ಅಂಗಡಿಯನ್ನು ಹಾಕಿಕೊಡುವುದಾಗಿ ನಂಬಿಸಿ ಅವರಿಂದ ಸುಮಾರು ಐದು ಲಕ್ಷ ರೂಪಾಯಿಯನ್ನು ಪಡೆದು ಬಟ್ಟೆ ಅಂಗಡಿಯನ್ನು ಹಾಕಿ ಕೊಡದೆ ಬಳಿಕ ಹಣವನ್ನೂ ಮರಳಿಸದೆ ವಂಚಿಸಿದ್ದಾರೆಂದು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ ತಾಲೂಕು ಕೋಡಿ ನಿವಾಸಿ ಸುದಿನ ಎಂಬವರು ಮೀನು ವ್ಯಾಪಾರವನ್ನು ನಡೆಸುತ್ತಿದ್ದರು. 2015 ರಲ್ಲಿ ಚೈತ್ರಾ ಕುಂದಾಪುರ ಪರಿಚಯವಾಗಿದ್ದು, ತನಗೆ ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನವಿದ್ದು, ಹಲವು ಮಂತ್ರಿಗಳು, ಸಚಿವರ ಹಾಗೂ ಶಾಸಕರ ನಿಕಟ ಸಂಪರ್ಕದಲ್ಲಿರುವುದಾಗಿ ಹೇಳಿ ಕೋಟದಲ್ಲಿ ಬಟ್ಟೆ ಅಂಗಡಿಯನ್ನು ಹಾಕಿಕೊಡುವುದಾಗಿ ತಿಳಿಸಿದ್ದಳು ಎನ್ನಲಾಗಿದೆ

ಬಳಿಕ ಚೈತ್ರಾ ಕುಂದಾಪುರ ಪದೇ ಪದೇ ಕರೆ ಮಾಡಿ ಸುದಿನ ಅವರಿಂದ 2018 ರಿಂದ 2022ರ ವರೆಗೆ ಸುಮಾರು ರೂಪಾಯಿ ಐದು ಲಕ್ಷವನ್ನು ಪಡೆದಿದ್ದಾಳೆ. ಸುಮಾರು ಮೂರು ಲಕ್ಷ ಹಣವನ್ನು ವಿಜಯವಾಡ ಶಾಖೆಯ ಕೋಟಕ್ ಮಹಿಂದ್ರ ಬ್ಯಾಂಕ್ ಹಾಗೂ ಕರ್ನಾಟಕ ಬ್ಯಾಂಕ್ ಸಾಸ್ತಾನ ಶಾಖೆಯ ಖಾತೆಯಿಂದ ಚೈತ್ರಾ ಖಾತೆಗೆ ವರ್ಗಾಯಿಸಿದ್ದು, ಇನ್ನುಳಿದ ಮೊತ್ತವನ್ನು ನಗದಾಗಿ 2023 ರ ತನಕ ಆಕೆಗೆ ನೀಡಿದ್ದೇನೆಂದು ದೂರಿನಲ್ಲಿ ವಿವರಿಸಿದ್ದಾರೆ.

ಪ್ರತಿ ಬಾರಿಯೂ ಅಂಗಡಿಯ ಬಗ್ಗೆ ಚೈತ್ರಾ ಬಳಿ ಕೇಳಿದಾಗ ಆಕೆ ಪ್ರತಿ ಬಾರಿಯೂ ಅಂಗಡಿ ಹಾಕುವ ಬಗ್ಗೆ ಈಗಾಗಲೇ ಸ್ಥಳೀಯ ಮುಖಂಡರಲ್ಲಿ ಮಾತುಕತೆ ನಡೆಸಿದ್ದು, ಅಂತಿಮ ಹಂತದಲ್ಲಿರುವುದಾಗಿ ಹೇಳುತ್ತಾ ಬಂದಿದ್ದು, ನಂತರದ ದಿನಗಳಲ್ಲಿ ಆಕೆಯು ಚುನಾವಣಾ ಪ್ರಚಾರ, ವಿವಿಧೆಡೆ ಭಾಷಣ-ಪ್ರವಚನ, ಕಾರ್ಯಕಾರಿಣಿ ಸಭೆ, ಪಕ್ಷದ ಮುಖಂಡರ ಭೇಟಿ ಇವುಗಳನ್ನು ನೆಪವಾಗಿಸಿ ದಿನಗಳನ್ನು ದೂಡುತ್ತಾ ಬಂದಿದ್ದು, ಮತ್ತಷ್ಟು ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದಾಳೆ ಎಂದು ದೂರಿದ್ದಾರೆ.

ಚೈತ್ರಾಳ ಬಗ್ಗೆ ಅನುಮಾನಗೊಂಡ ಸುದಿನ ಅವರು ಕೂಡಲೇ ಬಟ್ಟೆ ಅಂಗಡಿಯನ್ನು ಹಾಕಿ ಕೊಡುವಂತೆ ಅಥವಾ ನಾನು ನೀಡಿದ ಹಣವನ್ನು ಸಂಪೂರ್ಣವಾಗಿ ವಾಪಾಸು ನೀಡುವಂತೆ ಕೇಳಿದಾಗ ಚೈತ್ರಾ ಸುದಿನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣವನ್ನು ದಾಖಲಿಸುವುದಾಗಿ ಹಾಗೂ ಬಾಡಿಗೆ ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆಯನ್ನು ಹಾಕಿದ್ದಾಳೆ ಎನ್ನಲಾಗಿದೆ. ಸುದಿನ ಅವರ ದೂರಿನಂತೆ ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

   

Related Articles

error: Content is protected !!