ಕಾರವಾರ : ಪ್ರತಿಕೂಲ ಹವಾಮಾನದಿಂದಾಗಿ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಸಮೀಪದ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಗಂಗಾವಳಿ ನದಿಯ ನೀರಿನ ವೇಗ ಹೆಚ್ಚಿರುವುದು ಕಾರ್ಯಾಚರಣೆಗೆ ತೊಡಕಾಗಿದ್ದು, ನದಿಯ ನೀರಿನ ವೇಗ ಕಡಿಮೆಯಾದ ಮೇಲೆ ಮತ್ತೆ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ.
ತೀವ್ರ ಮಳೆಗೆ ಜು.16ರಂದು ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿ, 11 ಜನರು ಕಣ್ಮರೆಯಾಗಿದ್ದರು. ಈ ಪೈಕಿ, 8 ಮಂದಿಯ ಮೃತದೇಹ ಪತ್ತೆಯಾಗಿದ್ದು, ಇನ್ನೂ ಮೂವರಿಗಾಗಿ ಶೋಧ ಕಾರ್ಯ ನಡೆದಿದೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಜೊತೆ ಕಾರ್ಯಾಚರಣೆಗೆ ಮಿಲಿಟರಿ ನೆರವನ್ನೂ ಪಡೆಯಲಾಗಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ತಂಡ, ಸ್ಥಳೀಯ ಮೀನುಗಾರರು ಕೂಡ ಮೃತ ದೇಹಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, 13 ದಿನಗಳ ಸತತ ಕಾರ್ಯಾಚರಣೆ ಬಳಿಕವೂ ನಾಪತ್ತೆ ಯಾಗಿರುವ ಕೇರಳ ಲಾರಿ ಚಾಲಕ ಅರ್ಜುನ್, ಜಗನ್ನಾಥ ನಾಯ್ಕ, ಲೋಕೇಶ ನಾಯ್ಕಅವರ ಪತ್ತೆಯಾಗಿಲ್ಲ
ದೊರೆತ ಎಲ್ಲ ಎಂಟೂ ಶವಗಳು ಸಮುದ್ರ, ನದಿ ತೀರದಲ್ಲಿ ಪತ್ತೆಯಾಗಿದ್ದೇ ಹೊರತು ಕಾರ್ಯಾಚರಣೆ ಯಿಂದ ದೊರಕಿರಲಿಲ್ಲ. ಲಾರಿ ಇದೆ ಎಂದು ಗುರುತಿಸಲಾದ 4 ಪಾಯಿಂಟ್‌ಗಳಲ್ಲಿ ಸಾಹಸದಿಂದ ಡೈವ್ ಮಾಡಿದರೂ ಏನೂ ಪತ್ತೆಯಾಗಿಲ್ಲ.