ಕುಂದಾಪುರ : ಕಳೆದ ಕೆಲವು ವರ್ಷಗಳಿಂದ ನಾಡಿನ ಶಿಕ್ಷಣ ಹಾಗೂ ಕೃಷಿ ಕ್ಷೇತ್ರದ ಸಾಧಕರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ನೀಡುವ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರಶಸ್ತಿಗೆ ಈ ಬಾರಿ ಹಿರಿಯ ಕನ್ನಡ ಸಂಶೋಧಕ, ವಿಮರ್ಶಕ, ಅನುವಾದಕ ಹಾಗೂ ವಿಶ್ರಾಂತ ಕುಲಪತಿಗಳಾದ ಡಾ. ಬಿ. ಎ ವಿವೇಕ ರೈ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿ. ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ- 90 ಸಮಿತಿಯ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಮತ್ತು ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ರಾಮ್‌ಕಿಶನ್ ಹೆಗ್ಡೆ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಸುಮಾರು ಆರು ದಶಕಗಳ ಅನುಪಮ ಸೇವೆಯನ್ನು ಗುರುತಿಸಿ ಡಾ. ಬಿ. ಎ.ವಿವೇಕ ರೈ ಅವರಿಗೆ ಈ ಬಾರಿಯ ಬಸ್ರೂರು ಅಪಣ್ಣ ಹೆಗ್ಡೆ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಡಿ. 24 ರಂದು ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನ ಆವರಣದಲ್ಲಿ ನಡೆಯುವ ಬಿ. ಅಪ್ಪಣ್ಣ ಹೆಗ್ಡೆ-90 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕಳೆದ ಆರು ದಶಕಗಳಿಂದ ಅಧ್ಯಯನ ಅಧ್ಯಾಪನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ.ಬಿ.ಎ ವಿವೇಕ ರೈ ಅವರು ಕನ್ನಡ ಹಾಗೂ ತುಳು ಭಾಷೆಯ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ, ಜರ್ಮನಿಯ ವ್ಯೂಲ್ಸ್‌ಬುರ್ಗ್ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸಾಂಸ್ಕೃತಿಕ, ಕಲಾ ಅಭಿವೃದ್ಧಿಗಾಗಿ ಕೊಡುಗೆ ನೀಡಿದ್ದಾರೆ. 27ಕ್ಕಿಂತಲೂ ಹೆಚ್ಚು ಕೃತಿಗಳು, 5 ಇಂಗ್ಲಿಷ್ ಗ್ರಂಥಗಳು, ಅಂಕಣಗಳು ಸೇರಿ ಅಕ್ಷರ ಮುದ್ರೆಯ ಸಾಂಸ್ಕೃತಿಕ ಹಾಗೂ ಜನಪದ ಕ್ಷೇತ್ರಕ್ಕೆ ಸ್ಮರಣೀಯ ಕೊಡುಗೆ ನೀಡಿದ್ದಾರೆ.