ಭಕ್ತರಿಗೆ ಒಲಿದ ಬಾಲಕೃಷ್ಣ – ನಮ್ಮ ಉಡುಪಿಯ ಶ್ರೀಕೃಷ್ಣ
ಉಡುಪಿಯ ಶ್ರೀಕೃಷ್ಣ ಎಂದರೆ ಕೇವಲ ಕಲ್ಲಿನಲ್ಲಿ ಕೆತ್ತಿದ ಮೂರ್ತಿಯಲ್ಲ, ಅದು ಭಕ್ತಿಯ ಕರೆಗೆ ಓಗೊಟ್ಟ ಬಾಲಕೃಷ್ಣನ ಜೀವಂತ ಕಥೆ. ಭಕ್ತನು ಒಂದು ಹೆಜ್ಜೆ ಇಟ್ಟರೆ, ದೇವರು ನೂರು ಹೆಜ್ಜೆ ಮುಂದೆ ಬಂದು ಕೈಹಿಡಿಯುತ್ತಾನೆ ಎಂಬ ನಂಬಿಕೆಗೆ ಉಡುಪಿಯ ಶ್ರೀ ಕೃಷ್ಣ ಇಂದಿಗೂ ಸಾಕ್ಷಿಯಾಗಿ ನಿಲ್ಲುತ್ತಾನೆ.
ಕಥೆ ಆರಂಭವಾಗುವುದು ದ್ವಾರಕೆಯ ಪವಿತ್ರ ನೆಲದಲ್ಲಿ. ಲೋಕಕ್ಕೆ ರಾಜನಾಗಿ, ಧರ್ಮದ ರಕ್ಷಕನಾಗಿ, ಗೀತೆಯನ್ನು ಬೋಧಿಸಿದ ಜಗದ್ಗುರುವಾಗಿ ಕಾಣುತ್ತಿದ್ದ ಕೃಷ್ಣನು ರುಕ್ಮಿಣಿಯ ಕಣ್ಣಿಗೆ ಮಾತ್ರ ಸದಾ ಮುದ್ದಾದ ಬಾಲಕನಾಗಿ ಕಾಣುತ್ತಿದ್ದ,ಕಾಡುತ್ತಿದ್ದ ಕೂಡ. ಬೆಣ್ಣೆಯ ಸುವಾಸನೆಯೊಂದಿಗೆ ಓಡಾಡುವ ತುಂಟ ಕಂದ, ತುಟಿಯಂಚಿನಲ್ಲಿ ಮುಗ್ಧ ನಗು, ತಲೆಯ ಮೇಲೆ ನವಿಲುಗರಿ ಆ ಬಾಲಕೃಷ್ಣನ ರೂಪವೇ ಅವಳ ಹೃದಯದ ಆರಾಧನೆ. ಆ ರೂಪವನ್ನು ಸದಾ ಕಣ್ಣೆದುರು ಇಟ್ಟುಕೊಳ್ಳಲು ರುಕ್ಮಿಣಿಯೂ ಬಾಲಕೃಷ್ಣನ ದಿವ್ಯ ವಿಗ್ರಹವನ್ನು ಮಾಡಿಸಿ , ಆಕೆ ಆರಾಧಿಸುತ್ತಿದ್ದಳು.
ಯುಗಗಳು ಬದಲಾದವು. ದ್ವಾರಕೆಯ ವೈಭವ ಕಾಲವು ಅಲೆಗಳಲ್ಲಿ ಮರೆಯಾದರೂ, ರುಕ್ಮಿಣಿಯ ಭಕ್ತಿಯ ಸ್ಮರಣೆ ಮರೆಯಾಗಲಿಲ್ಲ. ಗೋಪಿಚಂದನದೊಳಗೆ ಸಂರಕ್ಷಿಸಲ್ಪಟ್ಟಿದ್ದ ಆ ದಿವ್ಯ ಬಾಲಕೃಷ್ಣ ಸಮುದ್ರದ ಅಲೆಗಳೊಂದಿಗೆ ದೂರದ ಕರಾವಳಿಯತ್ತ ಪಯಣಿಸಿದನು. ಅರಬ್ಬೀ ಸಮುದ್ರದ ಅಲೆಗಳು ಆ ಮೂರ್ತಿಯನ್ನು ಹೊತ್ತ ಹಡಗನ್ನು ಉಡುಪಿಯ ದಡದತ್ತ ಕರೆತಂದಿತು.ಅದೇ ಸಂದರ್ಭದಲ್ಲಿ ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಸಂಚರಿಸುತ್ತಿದ್ದರು. ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಹಡಗನ್ನು ತಮ್ಮ ಪ್ರಾರ್ಥನೆಯಿಂದ ಸುರಕ್ಷಿತವಾಗಿ ದಡ ಸೇರಿಸಿದರು, ಹಡಗಿನಿಂದ ದೊರೆತ ಗೋಪಿಚಂದನದ ಗಟ್ಟಿಯೊಳಗೆ ಅಡಗಿದ್ದ ದಿವ್ಯ ರಹಸ್ಯವನ್ನು ತೆರೆದಾಗ ಅಲ್ಲಿ ಮಣ್ಣು, ಕಲ್ಲುಗಳಿರಲಿಲ್ಲ. ರುಕ್ಮಿಣಿಯ ಹೃದಯದಲ್ಲಿ ನೆಲೆಸಿದ್ದ ಬಾಲಕೃಷ್ಣನೇ ಹೊರಬಂದನು.
ಮಧ್ವಾಚಾರ್ಯರು ಆ ದಿವ್ಯ ಮೂರ್ತಿಯನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು. ಸಮುದ್ರದ ಅಲೆಗಳನ್ನು ದಾಟಿ ಬಂದ ಕೃಷ್ಣನಿಗೆ ಉಡುಪಿಯ ಮಣ್ಣು ಶಾಶ್ವತ ತಾಯ್ನೆಲೆಯಾಯಿತು. ಅವನ ಆರಾಧನೆ ನಿರಂತರವಾಗಿ ನಡೆಯಲೆಂದು ಅಷ್ಟಮಠಗಳ ಪರಂಪರೆಯನ್ನು ರೂಪಿಸಿದರು. ಅಂದಿನಿಂದ ಉಡುಪಿಯ ಗಾಳಿಯಲ್ಲೂ ಕೃಷ್ಣನಾಮ , ಜಪ , ಆರಾಧನೆ ಪ್ರಾರಂಭವಾಯಿತು.
ಆದರೆ ಉಡುಪಿಯ ಕೃಷ್ಣನಿಗೆ ಭಕ್ತಿಯೆಂದರೆ ಕೇವಲ ಪೂಜೆ ಅಲ್ಲ, ಭಕ್ತನ ಕಣ್ಣೀರಿನ ಭಾಷೆಯೂ ಅವನಿಗೆ ಅರ್ಥವಾಗುತ್ತದೆ. ಅದಕ್ಕೆ ಸಾಕ್ಷಿ ಭಕ್ತ ಕನಕದಾಸರ ಕಥೆ.
ಕೃಷ್ಣನ ದರ್ಶನಕ್ಕಾಗಿ ಉಡುಪಿಗೆ ಬಂದ ಕನಕದಾಸರಿಗೆ ದೇವಾಲಯದೊಳಗೆ ಪ್ರವೇಶ ಸಿಗಲಿಲ್ಲ. ಆದರೆ ಬಾಗಿಲು ಮುಚ್ಚಿದ್ದರೂ ಅವರ ಭಕ್ತಿಯ ಬಾಗಿಲು ತೆರೆದಿತ್ತು. ದೇವರನ್ನು ಕಾಣಲು ಕಣ್ಣುಗಳು ಹಂಬಲಿಸಿದವು,ಆದರೆ ಹೃದಯದಲ್ಲಿ ಕೃಷ್ಣನ ರೂಪ ಈಗಾಗಲೇ ಅರಳಿತ್ತು.
ದೇವಾಲಯದ ಹಿಂಭಾಗದಲ್ಲಿ ನಿಂತ ಕನಕದಾಸರು ಕೃಷ್ಣನನ್ನು ಕರೆಯುತ್ತಾ ಹಾಡಿದರು. ಅವರ ಕಂಠದಲ್ಲಿ ನೋವಿತ್ತು, ಕಣ್ಣಲ್ಲಿ ಕಣ್ಣೀರು, ಆದರೆ ಹೃದಯದಲ್ಲಿ ಅಚಲ ಭಕ್ತಿ .ಆ ಕರೆಯನ್ನು ಬಾಲಕೃಷ್ಣ ಕೇಳಿದನೆಂಬುದು ನಂಬಿಕೆ.
ಭಕ್ತನ ಕಡೆ ನೋಡಲು ಕೃಷ್ಣನೇ ತನ್ನ ದಿಕ್ಕನ್ನು ಬದಲಿಸಿದನು. ಪೂರ್ವಾಭಿಮುಖವಾಗಿದ್ದ ಕೃಷ್ಣನ ವಿಗ್ರಹವು ಹಿಂಭಾಗದತ್ತ ತಿರುಗಿ ಕನಕದಾಸರಿಗೆ ದರ್ಶನ ನೀಡಿತು. ಆ ದಿವ್ಯ ದರ್ಶನದ ನೆನಪಾಗಿ ಉಳಿದ ಕಿಟಕಿಯೇ ಇಂದು ‘ಕನಕನ ಕಿಂಡಿ’.
ಉಡುಪಿಯ ಕೃಷ್ಣನ ಕಥೆ , ಭಕ್ತರ ಭಕ್ತಿಯಿಂದಲೇ ಶಕ್ತಿ ಪಡೆದುಕೊಂಡ ಕಥೆ , ಭಕ್ತರ ಮೊರೆಗೆ, ತಾನೇ ದರ್ಶನ ಕೊಟ್ಟ ಬಾಲಕೃಷ್ಣ ನಮ್ಮ ಭಕ್ತ ವತ್ಸಲ .ರುಕ್ಮಿಣಿಯ ಭಕ್ತಿಗಾಗಿ ಬಾಲಕನಾದ ಕೃಷ್ಣ, ಮಧ್ವಾಚಾರ್ಯರ ಭಕ್ತಿಗೆ ಒಲಿದು ಉಡುಪಿಗೆ ಬಂದ ಕೃಷ್ಣ, ಕನಕದಾಸರ ಕರೆಗೆ ತಿರುಗಿ ದರ್ಶನ ನೀಡಿದ ಕೃಷ್ಣ .
ಭಕ್ತನು ಯಾವ ರೂಪದಲ್ಲಿ ಕರೆಯುತ್ತಾನೋ, ಅದೇ ರೂಪದಲ್ಲಿ ಒಲಿಯುವ ಕರುಣಾಮಯನು. ದೇವಸ್ಥಾನದ ಬಾಗಿಲುಗಳು ಮುಚ್ಚಬಹುದು, ಆದರೆ ಭಗವಂತನ ಹೃದಯದ ಬಾಗಿಲು ಎಂದಿಗೂ ಮುಚ್ಚುವುದಿಲ್ಲ. ಭಕ್ತನ ಪ್ರತಿಯೊಂದು ಕರೆಯನ್ನು ಆಲಿಸುತ್ತಾನೆ , ಕಾಣುತ್ತಾನೆ, ಪ್ರತಿಯೊಂದು ಭಾವವನ್ನೂ ಅರಿಯುವನು ಎಂಬ ನಂಬಿಕೆಯನ್ನು ಉಡುಪಿಯ ಶ್ರೀಕೃಷ್ಣ ಇಂದಿಗೂ ಭಕ್ತರ ಹೃದಯದಲ್ಲಿ ಗಟ್ಟಿಗೊಳಿಸಿದ್ದಾನೆ.
-ಹರೇ ಕೃಷ್ಣ
-ಅರ್ಚನಾ.ರಾಮಕೃಷ್ಣ
ಕುಂದಾಪುರ

