ಕುಂದಾಪುರ : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಂಸ್ಥಾಪನಾ ದಿನವನ್ನು ಉದ್ಘಾಟಿಸಿದ ನಿವೃತ್ತ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಶ್ರೀ ಹೆಚ್. ಜಯಶೀಲ ಶೆಟ್ಟಿ, ಸಂಸ್ಥೆ ಸ್ಥಾಪನೆಯಾದ ತದನಂತರದಲ್ಲಿ ಅದರ ಅಭಿವೃದ್ಧಿಗೆ ಬಹಳಷ್ಟು ಶ್ರಮಪಟ್ಟಿದ್ದಾರೆ, ಆ ಶ್ರಮದ ಫಲ ಇಂದು ಕಾಣುತ್ತಿದೆ ಎಂದರು. ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದ ಶ್ರೀ ಎಸ್.ಎ. ಪ್ರಭಾಕರ್ ಶರ್ಮ, ಜಿಲ್ಲಾ ಪಂಚಾಯತ್ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾತನಾಡಿ, ಸಂಸ್ಥೆ ಸ್ಥಾಪನೆಯಾದ ಹದಿನಾಲ್ಕು ವರ್ಷಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಹಾಗೂ ಶಿಸ್ತನ್ನು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಕಾರ್ಕಳದ ಅಧ್ಯಕ್ಷ ಡಾ| ಸುಧಾಕರ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹಾಗೂ ಸತತ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬಿ.ಎಮ್. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಕಾರ್ಯದರ್ಶಿ ಶ್ರೀ ಸೀತಾರಾಮ ನಕ್ಕತ್ತಾಯ, ಐಕ್ಯೂಎಸಿ ಸಂಯೋಜಕಿ ಶ್ರೀಮತಿ ದೀಪಿಕಾ ಜಿ. ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಪ್ರಾಧ್ಯಾಪಕರಾದ ಪೂಜಾ ಕುಂದರ್, ಶ್ರೀ ಪ್ರಣಮ್ ಆರ್., ಶ್ರೀಮತಿ ಸ್ವಾತಿ ರಾವ್ ಅತಿಥಿಗಳನ್ನು ಪರಿಚಯಿಸಿ, ಶ್ರೀಮತಿ ವಿಲ್ಮಾ ಡಿ’ಸೋಜಾ ವಂದಿಸಿ, ಶ್ರೀಮತಿ ರೇಷ್ಮಾ ಶೆಟ್ಟಿ ನಿರೂಪಿಸಿದರು.