ಬೆಳ್ತಂಗಡಿ : ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಲು ಬುಧವಾರ ಬೆಳಗ್ಗೆ ಗರ್ಡಾಡಿ ಗ್ರಾಮದಲ್ಲಿರುವ ಶಾಸಕರ ಮನೆಗೆ ಬೆಳ್ತಂಗಡಿ ಪೊಲೀಸರು ಆಗಮಿಸಿದ್ದರು. ವಿಷಯ ತಿಳಿದು ನೂರಾರು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಪೊಲೀಸರು ಶಾಸಕರಿಗೆ ನೋಟಿಸ್ ಕೊಟ್ಟು ಬರಿಗೈಯಲ್ಲಿ ವಾಪಸ್ ಹೋದ ಘಟನೆ ನಡೆದಿದೆ. ಶಾಸಕರ ಮನೆಯೊಳಗೆ ಪೊಲೀಸರು ಮತ್ತು ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬ್ರಿಜೇಶ್ ಚೌಟಿ, ವಕೀಲರಾದ ಶಂಭು ಶರ್ಮ, ಅಜಯ್, ಸುಬ್ರಹ್ಮಣ್ಯ ಕುಮಾರ್ ಆಗರ್ತ, ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಹರಿಕೃಷ್ಣ ಬಂಟ್ವಾಳ ಮೊದಲಾದವರ ನಡುವೆ ಮಾತುಕತೆ, ವಾಗ್ವಾದ, ವಾದ, ಪ್ರತಿವಾದಗಳು ನಡೆದವು. ಕೊನೆಗೆ ಪೊಲೀಸರು ಶಾಸಕರಿಗೆ ನೋಟಿಸ್ ನೀಡಿದರು. ನೋಟಿಸ್‌ಗೆ ಐದು ದಿನಗಳಲ್ಲಿ ಉತ್ತರಿಸುವ ಭರವಸೆಯನ್ನು ಶಾಸಕರು ನೀಡಿದ ಹಿನ್ನೆಲೆಯಲ್ಲಿ ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಪೋಲಿಸರು ಶಾಸಕರನ್ನು ಬಂಧಿಸಲು ಸಾಧ್ಯವಾಗದೆ ತೆರಳಿದರು.
ಘಟನೆ ಹಿನ್ನೆಲೆ : ಪೊಲೀಸ್ ಇಲಾಖೆಗೆ ಹಾಗೂ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿ ಡಿಜೆ ಹಳ್ಳಿ ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಆದಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದು ಜೀವಬೆದರಿಕೆ ಒಡ್ಡಿರುವ ಬಗ್ಗೆ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ರೌಡಿ ಶೀಟರ್ ಶಶಿರಾಜ್ ಶೆಟ್ಟಿಯ ಬಂಧನ ವಿರೋಧಿಸಿ ಬೆಳ್ತಂಗಡಿ ವಿಕಾಸ ಸೌಧದ ಎದುರು ಸೋಮವಾರ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಲಾಗಿತ್ತು