ನವದೆಹಲಿ : ಅತ್ಯಂತ ನಮ್ರತೆ ಮತ್ತು ಕೃತಜ್ಞತೆಯಿಂದ ಇಂದು ನನಗೆ ನೀಡಲಾದ ‘ಭಾರತ ರತ್ನವನ್ನು ನಾನು ಸ್ವೀಕರಿಸುತ್ತೇನೆ. ಇದು ಒಬ್ಬ ವ್ಯಕ್ತಿಯಾಗಿ ನನಗೆ ಗೌರವ ಮಾತ್ರವಲ್ಲ ನನ್ನ ಜೀವನದುದ್ದಕ್ಕೂ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ನಾನು ಪಾಲಿಸಿದ ಆದರ್ಶಗಳು ಮತ್ತು ತತ್ವಗಳಿಗೂ ಸಂದ ಗೌರವವಾಗಿದೆ.
ನಾನು 14ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ ಸೇರಿದಾಗಿನಿಂದ ನಾನು ಜೀವನದಲ್ಲಿ ನನಗೆ ನಿಯೋಜಿಸಲ್ಪಟ್ಟ ಯಾವುದೇ ಕಾರ್ಯದಲ್ಲಿ ನನ್ನ ಪ್ರೀತಿಯ ದೇಶಕ್ಕಾಗಿ ಸಮರ್ಪಿಸಿಕೊಳ್ಳುವುದು ಮತ್ತು ನಿಸ್ವಾರ್ಥ ಸೇವೆಯಲ್ಲಷ್ಟೇ ಪ್ರತಿಫಲ ಕಂಡುಕೊಂಡಿದ್ದೇನೆ. ನನ್ನ ಜೀವನವನ್ನು ಇದಂ ನ ಮಮ, ಅಂದರೆ ‘ಈ ಜೀವನ ನನ್ನದಲ್ಲ. ನನ್ನ ಜೀವನ ನನ್ನ ರಾಷ್ಟ್ರಕ್ಕಾಗಿ‘ ಎಂಬ ಧೈಯವಾಕ್ಯ ನನ್ನನ್ನು ಸಾಕಷ್ಟು ಪ್ರೇರೇಪಿಸಿದೆ.
ಇಂದು ನಾನು ನಿಕಟವಾಗಿ ಕೆಲಸ ಮಾಡಿದ ಇಬ್ಬರು ವ್ಯಕ್ತಿಗಳಾದ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಮತ್ತು ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ನನ್ನ ಪಕ್ಷದ ಲಕ್ಷಾಂತರ ಕಾರ್ಯಕರ್ತರು ಸ್ವಯಂಸೇವಕರು ಮತ್ತು ಸಾರ್ವಜನಿಕ ಜೀವನದಲ್ಲಿ ನನ್ನ ಪ್ರಯಾಣದ ಉದ್ದಕ್ಕೂ ನನ್ನೊಂದಿಗಿದ್ದ ಇತರರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನನ್ನ ಕುಟುಂಬದ ಎಲ್ಲಾ ಸದಸ್ಯರಿಗೆ, ವಿಶೇಷವಾಗಿ ಆಗಲಿದ ನನ್ನ ಆತ್ಮೀಯ ಪತ್ನಿ ಕಮಲಾ ಅವರಿಗೆ ನನ್ನ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ. ಅವರು ನನ್ನ ಜೀವನದಲ್ಲಿ ಶಕ್ತಿ ಮತ್ತು ದೃಢ ಆತ್ಮವಿಶ್ವಾಸದ ಅತ್ಯುತ್ತಮ ಆಗರವಾಗಿದ್ದರು. ರಾಷ್ಟ್ರಪತಿ ಶ್ರೀಮತಿ ದೌಪದಿ ಮುರ್ಮು ಜಿ ಅವರಿಗೆ ಮತ್ತು ನನಗೆ ಈ ಗೌರವವನ್ನು ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ನನ್ನ ಹೃತೂರ್ವಕ ಧನ್ಯವಾದಗಳು. ನಮ್ಮ ಮಹಾನ್ ದೇಶವು ಪ್ರಗತಿಯಲ್ಲಿ ಶ್ರೇಷ್ಠತೆ ಮತ್ತು ಯಶಸ್ಸಿನ ಪರಾಕಾಷ್ಠೆಯನ್ನು ತಲುಪಲಿ ಎಂದು ಆಶಿಸುತ್ತೇನೆ.
ಎಲ್.ಕೆ.ಆಡ್ವಾಣಿ