‘ಉಡುಪಿ : ಸನಾತನ ಧರ್ಮ ನಿರ್ಮೂಲನೆಗಾಗಿಯೇ ಐಎನ್ಡಿಐಎ ಮೈತ್ರಿಕೂಟ’ ಎಂದಿರುವ ತಮಿಳುನಾಡು ಸಚಿವ ಪೊನ್ಮುಡಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ. ದಿನಕ್ಕೊಂದು ರೀತಿಯ ವಿಲಕ್ಷಣಕಾರಿ ಹೇಳಿಕೆಗಳನ್ನು ನೀಡುತ್ತಿರುವ ವಿಪಕ್ಷಗಳ ಐಎನ್ಡಿಐಎ ಮೈತ್ರಿಕೂಟ ಹುಚ್ಚರ ಸಂತೆಯಂತಾಗಿದೆ. ಕಾಂಗ್ರೆಸ್ ಸಹಿತ ಐಎನ್ಡಿಐಎ ಮೈತ್ರಿಕೂಟಕ್ಕೆ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ನಿರ್ದಿಷ್ಟ ದೂರದರ್ಶಿತ್ವದ ಚಿಂತನೆಗಳಿಲ್ಲದೆ, ಕೇವಲ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡು 26 ವಿಪಕ್ಷಗಳು ರಚಿಸಿರುವ ಐಎನ್ಡಿಐಎ ಮೈತ್ರಿಕೂಟ, ಪ್ರಧಾನಿ ನರೇಂದ್ರ ಮೋದಿಯವರ ಅದ್ವಿತೀಯ ಸಾಧನೆಯನ್ನು ಕಂಡು ಅಸಹಾಯಕತೆಯಿಂದ ಮೈಪರಚಿಕೊಳ್ಳುತ್ತಾ, ಚೀರಾಡುತ್ತಿರುವ ದಯನೀಯ ಸ್ಥಿತಿಯಲ್ಲಿರುವ ಸನ್ನಿವೇಶದಲ್ಲಿ ಕೈಗೆ ಅಧಿಕಾರವೇನಾದರೂ ದೊರೆತಲ್ಲಿ ದೇಶದ ಸ್ಥಿತಿ ಎಂತಹ ಅಧೋಗತಿಗೆ ತಲುಪಬಹುದು ಎಂಬುದನ್ನು ಊಹಿಸಲೂ ಅಸಾಧ್ಯ ಎಂದು ಅವರು ತಿಳಿಸಿದ್ದಾರೆ.
ಸನಾತನ ಧರ್ಮವನ್ನು ವಿವಿಧ ಕಾಯಿಲೆಗಳಿಗೆ ಹೋಲಿಸಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ದೊಡ್ಡ ವಿವಾದಕ್ಕೆ ಗುರಿಯಾಗಿದ್ದು, ಹಿಂದೂಗಳು ಈತನ ಉದ್ಯಮದ ಉತ್ಪನ್ನಗಳನ್ನು ನಿಷೇಧಿಸುವ ಜೊತೆಗೆ ಈತನ ಚಿತ್ರವಿರುವ ಪೋಸ್ಟರ್ ಗಳನ್ನು ಸಾರ್ವಜನಿಕ ಶೌಚಾಲಯಗಳಲ್ಲಿ ಅಂಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಹಗರಣಗಳ ದೊರೆ ಡಿಎಂಕೆ ಸಂಸದ ಎ.ರಾಜಾ ಸನಾತನ ಧರ್ಮವನ್ನು ಏಡ್ಸ್ ರೋಗಕ್ಕೆ ಹೋಲಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದು, ಇದೀಗ ತಮಿಳುನಾಡು ಶಿಕ್ಷಣ ಸಚಿವ ಪೊನ್ಮುಡಿ ಕೂಡಾ ಸನಾತನ ಧರ್ಮದ ಬಗ್ಗೆ ವಿಷ ಕಾರುವ ಮೂಲಕ ಐಎನ್ಡಿಐಎ ಮೈತ್ರಿಕೂಟದ ಅಧಃಪತನಕ್ಕೆ ನಾಂದಿ ಹಾಡಿರುವುದು ಹಾಸ್ಯಾಸ್ಪದವೆನಿಸಿದೆ.
ಇದರ ನಡುವೆ ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ್ ರವರು ಕೂಡಾ ಹಿಂದೂ ಧರ್ಮದ ಅಸ್ತಿತ್ವವನ್ನೇ ಪ್ರಶ್ನಿಸುವ ಮೂಲಕ ಅವರ ಪೂರ್ವಜರ ಧರ್ಮವನ್ನು ಅವಹೇಳನ ಮಾಡುವ ಮಟ್ಟಕ್ಕೆ ಇಳಿದಿರುವುದು ವಿಷಾದನೀಯ.
‘ಹಿಂದೂ ಧರ್ಮದಷ್ಟು ಪರಿಪೂರ್ಣ, ವೈಜ್ಞಾನಿಕ, ದಾರ್ಶನಿಕ ಮತ್ತು ಆಧ್ಯಾತ್ಮಿಕದಂತಹ ಧರ್ಮ ಬೇರೊಂದಿಲ್ಲ. ಹಿಂದುತ್ವ ಇಲ್ಲದೆ ಭಾರತಕ್ಕೆ ಭವಿಷ್ಯವೇ ಇಲ್ಲ. ಹಿಂದುತ್ವ ಎಂಬ ಮಣ್ಣಿನಲ್ಲಿ ಭಾರತದ ಬೇರು ಆಳಕ್ಕೆ ಇಳಿದಿದೆ. ಹೀಗಿರುವಾಗ ಹಿಂದುತ್ವ ಮತ್ತು ಭಾರತ ಒಂದೇ’ ಎಂದಿರುವ ಪ್ರಖ್ಯಾತ ಅಧ್ಯಯನಗಾರ್ತಿ ಆನಿ ಬೆಸೆಂಟ್ ರವರ ನುಡಿಮುತ್ತುಗಳನ್ನು ಐಎನ್ಡಿಐಎ ಮೈತ್ರಿಕೂಟದ ನಾಯಕರು ಸರಿಯಾಗಿ ಅರ್ಥೈಸಿಕೊಳ್ಳುವ ಅಗತ್ಯವಿದೆ.
‘ಸನಾತನ ಧರ್ಮ’ ಎಂಬುದು ಭಾರತದ ಸಂಸ್ಕೃತಿ, ಪರಂಪರೆ, ಜೀವನ ಪದ್ಧತಿ ಹಾಗೂ ಈ ದೇಶದ ಜೀವಾಳ. ಸನಾತನ ಧರ್ಮ ಸೂರ್ಯ ಚಂದ್ರ ಇರುವ ವರೆಗೂ ವಿಜೃಂಭಿಸಲಿದೆ. ಸನಾತನ ಧರ್ಮದ ವೈಶಾಲ್ಯತೆ ಮತ್ತು ಅಗಾಧತೆಯನ್ನು ಅರಿಯದ ಕೆಲವು ಮೂರ್ಖರ ವರ್ತನೆ ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬಂತಿದೆ. ಈ ಎಲ್ಲಾ ಪ್ರಕ್ರಿಯೆಗಳು ವಿಪಕ್ಷಗಳ ಐಎನ್ಡಿಐಎ ಮೈತ್ರಿಕೂಟದ ಅವನತಿಗೆ ಮುನ್ನುಡಿ ಬರೆಯಲಿರುವುದು ನಿಶ್ಚಿತ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ