ಉಡುಪಿ :ಸ್ವಾತಂತ್ರ್ಯಾನಂತರ ನಕಲಿ ಗಾಂಧಿ ಪರಿವಾರದ ಸುಪರ್ದಿಯಲ್ಲೇ ಸುಧೀರ್ಘ ಅವಧಿಗೆ ದೇಶವನ್ನಾಳಿದ ಕಾಂಗ್ರೆಸ್ ಕುಟುಂಬ ರಾಜಕಾರಣದ ಪಿತಾಮಹ ಎಂಬುದು ಜಗಜ್ಜಾಹೀರಾಗಿದೆ. ಜೀವನ ಪರ್ಯಂತ ಒಂದೇ ಕುಟುಂಬಕ್ಕೆ ಬಹು ಪರಾಕ್ ಹೇಳುವ ಕಾಗ್ರೆಸಿಗರಿಗೆ ಬಿಜೆಪಿ ರಾಜ್ಯ ನಾಯಕತ್ವದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ರವರ ಕುಟುಂಬ ರಾಜಕಾರಣದಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತ ಆಧಾರಿತ ರಾಜಕೀಯ ಪಕ್ಷ. ಕಾರ್ಯಕರ್ತರೇ ಪಕ್ಷದ ಜೀವಾಳ. ಈ ಹಿನ್ನೆಲೆಯಲ್ಲಿ ಪಕ್ಷದ ಓರ್ವ ನಿಷ್ಠಾವಂತ ಕಾರ್ಯಕರ್ತ, ಸಂಘಟನಾ ಚತುರ, ಯುವ ನಾಯಕ ಬಿ.ವೈ. ವಿಜಯೇಂದ್ರರವರನ್ನು ವರಿಷ್ಠರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಸಮಯೋಚಿತವಾಗಿದೆ. ಯುವ ನಾಯಕತ್ವದಿಂದ ಯುವ ಶಕ್ತಿಗೆ ಹೊಸ ಚೈತನ್ಯ ತುಂಬಿರುವ ಜೊತೆಗೆ ಬಿಜೆಪಿ ರಾಜ್ಯಾದ್ಯಂತ ಇನ್ನಷ್ಟು ಬಲಿಷ್ಠವಾಗಿ ಬೆಳೆದು ಮುಂದಿನ ಎಲ್ಲ ಚುನಾವಣೆಗಳಲ್ಲಿ ಭರ್ಜರಿ ವಿಜಯ ದಾಖಲಿಸುವುದು ನಿಶ್ಚಿತ. ಬಿ.ವೈ. ವಿಜಯೇಂದ್ರರವರು ಮಾಸ್ ಲೀಡರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ಪುತ್ರ ಎಂಬುದು ಹೆಮ್ಮೆಯ ವಿಚಾರ. ಆದರೆ ಕಾಂಗ್ರೆಸಿಗರು ಸಿ.ಎಂ. ಸಿದ್ಧರಾಮಯ್ಯ ಹಾಗೂ ಇನ್ನಿತರ ಘಟಾನುಘಟಿ ಕಾಂಗ್ರೆಸ್ ನಾಯಕರ ಕುಟುಂಬ ರಾಜಕಾರಣದ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಕ್ಷ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಹಿರಿಮೆಯ ಸಹಿತ ಕಳೆದ ಉಪ ಚುನಾವಣೆಯಲ್ಲೂ ಬಿಜೆಪಿ ಗೆಲುವಿನ ರೂವಾರಿಯಾಗಿದ್ದ ಬಿ.ವೈ. ವಿಜಯೇಂದ್ರರವರ ರಾಜ್ಯ ನಾಯಕತ್ವದ ಆಯ್ಕೆಯಿಂದ ಕಾಂಗ್ರೆಸ್ ಪಾಳಯದಲ್ಲಿ ನಡುಕ ಉಂಟಾಗಿರುವುದು ವಾಸ್ತವ. ಭ್ರಷ್ಟಾಚಾರ, ಕುಸಿದ ಆಡಳಿತ ಯಂತ್ರ, ಬಣ ರಾಜಕೀಯ, ಬರ ನಿರ್ವಹಣೆಯಲ್ಲಿ ವೈಫಲ್ಯ, ಹಳ್ಳ ಹಿಡಿದಿರುವ ಗ್ಯಾರಂಟಿ ಯೋಜನೆಗಳು, ಸಾಲು ಸಾಲು ಹಗರಣಗಳು, ಸರಣಿ ಪ್ರತಿಭಟನೆಗಳು, ಸಿ.ಎಂ. ಡಿ.ಸಿ.ಎಂ. ಸ್ಥಾನಕ್ಕೆ ಪೈಪೋಟಿ, ಹಳಿ ತಪ್ಪಿದ ಆರ್ಥಿಕತೆ, ಅಭಿವೃದ್ಧಿ ಸ್ಥಗಿತ, ಆಡಳಿತ ವಿರೋಧಿ ಅಲೆ ಇವೇ ಮುoತಾದ ಜ್ವಲಂತ ಸಮಸ್ಯೆಗಳಿಂದ ಸೊರಗಿರುವ ರಾಜ್ಯ ಕಾಂಗ್ರೆಸ್ ಸರಕಾರ ಅಸ್ತಿತ್ವದ ಗ್ಯಾರಂಟಿಯನ್ನೇ ಕಳೆದುಕೊಂಡಿರುವುದು ಜನಜನಿತವಾಗಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರು ಜನತೆಯ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸಲು ಇಲ್ಲಸಲ್ಲದ ವಿಚಾರಗಳನ್ನು ಮುನ್ನೆಲೆಗೆ ತಂದು ಮುಖಭಂಗ ಅನುಭವಿಸುತ್ತಿರುವುದು ಸ್ಪಷ್ಟವಾಗಿದೆ.
ತತ್ವ ಸಿದ್ಧಾಂತಗಳ ಬಗ್ಗೆ ಬೊಗಳೆ ಬಿಡುತ್ತಿರುವ ಕಾಂಗ್ರೆಸ್ ಈ ಹಿಂದೆ ಅಧಿಕಾರ ದಾಹದಿಂದ ಜೆಡಿಎಸ್ ಜೊತೆಗೆ ಮೈತ್ರಿ ಸರಕಾರ ರಚಿಸಿರುವುದನ್ನು ಮರೆತು ಇಬ್ಬಗೆ ನೀತಿ ಪ್ರದರ್ಶಿಸುತ್ತಿರುವುದು ವಿಪರ್ಯಾಸ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಹಿಂದೆಂದೂ ಕಂಡರಿಯದ ಅದ್ಭುತ ಪ್ರಗತಿ ಸಾಧಿಸಿದೆ. ನೂತನ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಬಿ.ವೈ. ವಿಜಯೇಂದ್ರರವರು ಬೂತ್ ಮಟ್ಟದಿಂದ ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿ ಸಂಘಟಿಸುವ ಪಣತೊಟ್ಟು ಬೂತ್ ಅಧ್ಯಕ್ಷರ ಬೇಟಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಸದ್ಯದಲ್ಲೇ ಪಕ್ಷದ ಶಾಸಕಾಂಗ ಸಭೆ ನಡೆದು ವಿರೋಧ ಪಕ್ಷದ ನಾಯಕನ ಆಯ್ಕೆಯೂ ನಡೆಯಲಿದೆ. ಲೋಕಸಭೆ ಸಹಿತ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ. ಆದರೆ ತಮ್ಮ ಹುಳುಕನ್ನು ಮುಚ್ಚಿಟ್ಟು ಇತರ ಪಕ್ಷಗಳತ್ತ ಬೆರಳು ತೋರುವ ಕಾಂಗ್ರೆಸ್ ಚಾಳಿಗೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಠಾಕೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ