ಉಡುಪಿ : ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ ಎನ್ನಲು ಸಿದ್ಧರಾಮಯ್ಯನವರೇನು ದೇಶದ ಪ್ರಧಾನ ಮಂತ್ರಿಯೇ ಅಥವಾ ದೇಶದ ಸಂಪತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪಿತ್ರಾರ್ಜಿತ ಆಸ್ತಿಯೇ? ದೇಶದ ಸಂಪತ್ತನ್ನು ಒಂದೇ ಕೋಮಿಗೆ ಹಂಚಲು ಇವರಿಗೇನು ಹಕ್ಕಿದೆ? ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ದಕ್ಷಿಣ ಭಾರತದ ಮುಸ್ಲಿಂ ಗುರುಗಳ ಸಮಾವೇಶದಲ್ಲಿ ಕೇವಲ ರಾಜಕೀಯ ಲಾಭಕ್ಕಾಗಿ ಮುಸ್ಲಿಂ ಸಮುದಾಯವನ್ನು ಖುಷಿಪಡಿಸುವ ಸಲುವಾಗಿ ಇಂತಹ ಸಂವಿಧಾನ ವಿರೋಧಿ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ದೇಶದ ಅತೀ ದೊಡ್ಡ ಕೋಮುವಾದಿ ಪಕ್ಷ ಎಂಬುದನ್ನು ಸಿ.ಎಂ. ಸಿದ್ಧರಾಮಯ್ಯ ಸಾಬೀತುಪಡಿಸಿದ್ದಾರೆ.
ಈ ಹಿಂದೆ ಮುಸ್ಲಿಂ ತುಷ್ಟೀಕರಣಕ್ಕಾಗಿ ಟಿಪ್ಪು ಜಯಂತಿ ಆಚರಣೆ, ಒಂದೇ ಕೋಮಿಗೆ ಶಾದಿ ಭಾಗ್ಯ, ಮಕ್ಕಳಿಗೆ ಪ್ರವಾಸ ಭಾಗ್ಯ, ಮತಾಂಧ ಜಿಹಾದಿ ಸಂಘಟನೆಗಳ ಕೇಸ್ ವಾಪಾಸು ಜೊತೆಗೆ ಆರೋಪಿಗಳಿಗೆ ಬಿಡುಗಡೆ ಭಾಗ್ಯ ನೀಡಿದ್ದ ಸಿದ್ಧರಾಮಯ್ಯ ಮಕ್ಮಲ್ ಟೋಪಿಗೆ ತಲೆಯೊಡ್ಡುತ್ತಾ, ಕೇಸರಿ ಕಂಡರೆ ಉರಿದು ಬೀಳುತ್ತಾ ತಾನು ಕೇವಲ ಒಂದೇ ಕೋಮಿಗೆ ಮುಖ್ಯಮಂತ್ರಿ ಎಂಬ ಭಾವನೆಯನ್ನು ಜನತೆಯಲ್ಲಿ ಜಾಗೃತಗೊಳಿಸುತ್ತಿರುವಂತೆ ಬಾಸವಾಗುತ್ತಿದೆ.
ಮತಾಂಧ ಟಿಪ್ಪುವಿನ ಕನಸನ್ನು ನನಸಾಗಿಸಲು ಹೊರಟಿರುವ ಸಿ.ಎಂ. ಸಿದ್ದರಾಮಯ್ಯ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 10,000 ಕೋಟಿ ಅನುದಾನ ನೀಡುವುದಾಗಿ ಘೋಷಿಸಿದ್ದು, ಜನತೆ ಹಿಂದುಗಳಿಗೆ ಏನಾದರೂ ಇದೆಯೇ ನಿಮ್ಮ ಸರ್ಕಾರದಲ್ಲಿ ಎಂದು ಪ್ರಶ್ನಿಸುವಂತಾಗಿದೆ. ನಕಲಿ ಗ್ಯಾರಂಟಿಗಳ ಹಿನ್ನೆಲೆಯಲ್ಲಿ ಬರ ಪರಿಹಾರ ಸಹಿತ ಕನಿಷ್ಠ ರಸ್ತೆ ರಿಪೇರಿ ಕಾಮಗಾರಿಗೂ ಹಣವಿಲ್ಲದೆ ಪರದಾಡುತ್ತಿರುವ ಸಿ.ಎಂ. ಸಿದ್ಧರಾಮಯ್ಯ ಖಜಾನೆಯನ್ನು ಬರಿದಾಗಿಸಿ, ಸಾವಿರಾರು ಕೋಟಿ ರೂಪಾಯಿ ನೀಡುವ ವಾಗ್ದಾನದ ಕನಸಿನ ಗೋಪುರವನ್ನು ಕಟ್ಟುತ್ತಿರುವುದು ವಿಷಾದನೀಯ.ಈ ಹಿಂದಿನ ಅವಧಿಯಲ್ಲಿ ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದ ಸಿದ್ಧರಾಮಯ್ಯ, ಮುಸ್ಲಿಂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಉತ್ಸುಕತೆ ತೋರುತ್ತಾ, ಹಿಂದೂ ಧಾರ್ಮಿಕ ಕೇಂದ್ರಗಳು ಮತ್ತು ದೇವಸ್ಥಾನಗಳ ಅಭಿವೃದ್ಧಿಯನ್ನು ಕಡೆಗಣಿಸಿರುವುದು ವಿಪರ್ಯಾಸ.
ಟ್ರಿಪಲ್ ತಲಾಖ್ ರದ್ದತಿ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಂ ಮಹಿಳೆಯರ ಸ್ವಾಭಿಮಾನದ ಬದುಕಿಗೆ ನಾಂದಿ ಹಾಡಿದ್ದಾರೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ತತ್ವದಡಿ ಎಲ್ಲ ವರ್ಗಗಳ ಜನತೆಗೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ವಿಕಾಸಕ್ಕೆ ಉದಾತ್ತ ಯೋಜನೆಗಳನ್ನು ಜಾರಿಗೆ ತಂದಿರುವ ಕಾರಣದಿಂದಾಗಿ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಪ್ರಚಂಡ ಗೆಲುವು ಸಾಧಿಸಿದೆ.
ಜಾತಿ, ಧರ್ಮಗಳ ಮಧ್ಯೆ ವಿಷಬೀಜ ಬಿತ್ತುವ ಇಂತಹ ತುಷ್ಟೀಕರಣ ನೀತಿಗಳಿಂದಲೇ ಕೋಮುವಾದಿ ಕಾಂಗ್ರೆಸ್ ದೇಶದಾದ್ಯಂತ ಅಧಿಕಾರ ಕಳೆದುಕೊಂಡು ಕೇವಲ 4 ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನಪರ, ಅಭಿವೃದ್ದಿ ಪರ ಆಡಳಿತ ವೈಖರಿಯಿಂದ ಬಿಜೆಪಿ ಇಂದು 17 ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿಚಿದ್ರಕಾರಿ, ವಿಭಜನಕಾರಿ ಮನಸ್ಥಿತಿಯ ಬಗ್ಗೆ ರಾಜ್ಯದ ಜನತೆ ಎಚ್ಚೆತ್ತುಕೊಂಡು ಮುಂದಿನ ಚುನಾವಣೆಗಳಲ್ಲಿ ಜನವಿರೋಧಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ