ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಪರವಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಕಾಲೋನಿಗಳಲ್ಲಿ ಸುಳ್ಯದ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಪ್ರಚಾರ ನಡೆಸಿದರು.
ಕ್ಷೇತ್ರದ ವಿವಿಧ ಭಾಗದಲ್ಲಿ ಇರುವ ಪರಿಶಿಷ್ಟ ಜಾತಿಯ ಕಾಲೋನಿಗಳ ಮನೆಗಳಿಗೆ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಎಸ್ಸಿ ಮೋರ್ಚಾದ ಮುಖಂಡರೊಂದಿಗೆ ಭೇಟಿ ನೀಡಿ, ಮತಯಾಚನೆ ನಡೆಸಿದರು.
ಬಿಜೆಪಿ ಸರ್ಕಾರದಲ್ಲಿ ಪರಿಶಿಷ್ಟರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಲಾಗಿತ್ತು. ಕೇಂದ್ರ ಬಿಜೆಪಿ ಸರ್ಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ವಿಶೇಷ ಗೌರವ ನೀಡಿ, ಅವರಿಗೆ ಸಂಬಂಧಿಸಿದ ಐದು ಕ್ಷೇತ್ರಗಳನ್ನು ಪಂಚಪೀಠವಾಗಿ ಅಭಿವೃದ್ಧಿಪಡಿಸಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ಪಂಗಡಗಳ ಶ್ರೇಯಾಭಿವೃದ್ಧಿಗೆ ಮೀಸಲಿಟ್ಟಿದ್ದ 11,500 ಕೋಟಿ ರೂ.ಗಳನ್ನು ಗ್ಯಾರಂಟಿಗೆ ಉಪಯೋಗಿಸುವ ಮೂಲಕ ಪರಿಶಿಷ್ಟ ಜಾತಿ, ಪಂಗಡಗಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಸದಾ ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ ಶ್ರಮಿಸುವ ಬಿಜೆಪಿಯನ್ನು ಬೆಂಬಲಿಸೋಣ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರನ್ನು ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುವಂತೆ ಎಲ್ಲರೂ ಮತದಾನ ಮಾಡೋಣ ಎಂದು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಮಾಡಿದರು.
ಗುಜ್ಜಾಡಿಯ ಸಂಗಮೇಶ್ವರ ದೇವಸ್ಥಾನ, ಕಟ್ ಬೆಲ್ತೂರಿನ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದರು.
ರಾಜ್ಯ ಎಸ್ ಸಿ ಮೋರ್ಚಾ ಉಪಾಧ್ಯಕ್ಷರಾದ ದಿನಕರ ಬಾಬು, ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ಚಂದ್ರ ಪಂಚವಟಿ, ಬೈಂದೂರು ಮಂಡಲ ಎಸ್ ಸಿ ಮೋರ್ಚಾ ಅಧ್ಯಕ್ಷ ಅಶೋಕ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು