Home » ಮಂಗಳೂರು ಕಾರಾಗೃಹದಲ್ಲಿ ಕೈದಿಗಳು ಜೈಲು ಅಧೀಕ್ಷಕರ ಮೇಲೆ ಹಲ್ಲೆಗೆ ಯತ್ನ
 

ಮಂಗಳೂರು ಕಾರಾಗೃಹದಲ್ಲಿ ಕೈದಿಗಳು ಜೈಲು ಅಧೀಕ್ಷಕರ ಮೇಲೆ ಹಲ್ಲೆಗೆ ಯತ್ನ

by Kundapur Xpress
Spread the love

ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಜೈಲು ಅಧೀಕ್ಷಕರು ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಮಾರ್ಚ್ 13ರಂದು ನಡೆದಿದೆ.

ಕೈದಿಗಳಾದ ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಆಫ್ರೀದ್ ಮತ್ತು ಶೇಹರಾಜ್ ಅಲಿಯಾಸ್ ಶಾರೂಕ್ ಎಂಬುವವರು ಜೈಲಿನಲ್ಲಿ ಗಲಾಟೆ ಎಬ್ಬಿಸಿದ್ದಾರೆ.

ಮಾರ್ಚ್ 13ರ ರಾತ್ರಿ ಸುಮಾರು 8:00 ಗಂಟೆಗೆ ಜೈಲು ಅಧೀಕ್ಷಕ ಶರಣಬಸಪ್ಪ ಅವರು ಕರ್ತವ್ಯದಲ್ಲಿದ್ದಾಗ, ವಿಚಾರಣಾಧೀನ ಕೈದಿ ಮೊಹಮ್ಮದ್ ಇಕ್ಬಾಲ್ ಅಧೀಕ್ಷಕರ ಕಚೇರಿಗೆ ನುಗ್ಗಿ ರಂಪಾಟ ಮಾಡಿದ್ದಾನೆ.ಹೊಸದಾಗಿ ಬರುವ ಕೈದಿಗಳನ್ನು ತನ್ನ ಸೂಚನೆಯಂತೆ ತನ್ನ ಕೊಠಡಿಗೇ ಸೇರಿಸಬೇಕು ಎಂದು ಪಟ್ಟು ಹಿಡಿದು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.

ಅಧೀಕ್ಷಕರಿಗೆ “ನೀನೇ ನನ್ನ ಟಾರ್ಗೆಟ್” ಎಂದು ಕೊಲೆ ಬೆದರಿಕೆ ಹಾಕಿದ ಇಕ್ಬಾಲ್, ಹಲ್ಲೆಗೆ ಮುಂದಾಗಿದ್ದಾನೆ. ಈತನಿಗೆ ಸಾಥ್ ನೀಡಿದ ಮತ್ತೊಬ್ಬ ಕೈದಿ ಮೊಹಮ್ಮದ್ ಆಫ್ರೀದ್ ಪ್ಲಾಸ್ಟಿಕ್ ಕುರ್ಚಿಯಿಂದ ಸಿಬ್ಬಂದಿಗಳ ಮೇಲೆ ದಾಳಿಗೆ ಯತ್ನಿಸಿದ್ದಾನೆ.

ಇಬ್ಬರು ಕೈದಿಗಳು ಸೇರಿ ಜೈಲಿನಲ್ಲಿದ್ದ R.O. ವಾಟರ್ ಫಿಲ್ಟರ್ ಮಷಿನ್ ಮತ್ತು ಪೈಪ್‌ಗಳನ್ನು ಧ್ವಂಸಗೊಳಿಸಿದ್ದಾರೆ. ಇದರ ಅಂದಾಜು ಮೌಲ್ಯ ₹12,000 ಎಂದು ಹೇಳಲಾಗಿದೆ.

ಇದೇ ಸಮಯದಲ್ಲಿ ಶೇಹರಾಜ್ ಅಲಿಯಾಸ್ ಶಾರೂಕ್ ಎಂಬ ಕೈದಿ ಕೊಠಡಿಯ ಒಳಗಿನಿಂದಲೇ ಹಾಸಿಗೆ-ಹೊದಿಕೆಗಳಿಗೆ ಬೆಂಕಿ ಹಚ್ಚಿ, ಕ್ಯಾರಂ ಬೋರ್ಡ್‌ಗಳನ್ನು ಮುರಿದು ಹಲ್ಲೆ ಮಾಡಲು ಪ್ರಚೋದಿಸಿದ್ದಾನೆ. ಅಧೀಕ್ಷಕ ಶರಣಬಸಪ್ಪ ಅವರು ನೀಡಿದ ದೂರಿನ ಮೇರೆಗೆ ಮೂವರು ಕೈದಿಗಳ ವಿರುದ್ಧ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಜೀವ ಬೆದರಿಕೆ ಮತ್ತು ಸರ್ಕಾರಿ ಸ್ವತ್ತು ನಾಶಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!