Home » ಅರ್ಹ ಬಗರ್ ಹುಕುಂ ಅರ್ಜಿಗಳನ್ನು ತಂತ್ರಾಂಶಕ್ಕೆ ಅಳವಡಿಸಲು ಕ್ರಮ
 

ಅರ್ಹ ಬಗರ್ ಹುಕುಂ ಅರ್ಜಿಗಳನ್ನು ತಂತ್ರಾಂಶಕ್ಕೆ ಅಳವಡಿಸಲು ಕ್ರಮ

: ಶಾಸಕ ಗುರುರಾಜ್ ಗಂಟಿಹೊಳೆ

by Kundapur Xpress
Spread the love

ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂದಾಪುರ ತಾಲೂಕಿನ ವಂಡ್ಸೆ ಹೋಬಳಿಯ ಗ್ರಾಮಗಳಿಗೆ ಸಂಬಂಧಿಸಿದಂತೆ 94ಸಿ ಅರ್ಜಿಗಳು ಹಾಗೂ ಬಗರ್ ಹುಕುಂ ಅರ್ಜಿಗಳ ತ್ವರಿತ ವಿಲೇವಾರಿ ಬಗ್ಗೆ ಕಂದಾಯ ಇಲಾಖಾ ಅಧಿಕಾರಿಗಳೊಂದಿಗೆ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆಯವರು ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು.

ಸೆಪ್ಟೆಂಬರ್ ತಿಂಗಳಿನಿಂದ ಡಿಸೆಂಬರ್ ಅಂತ್ಯದವರೆಗೆ ಸುಮಾರು 38 ಅರ್ಹ ಫಲನುಭವಿಗಳಿಗೆ 94 ಸಿ ಅಡಿ ಹಕ್ಕು ಪತ್ರ ನೀಡಲಾಗಿದೆ. 2025ರ ಜನವರಿ ಅಂತ್ಯಕ್ಕೆ ಸಮಸ್ಯಾತ್ಮಕವಲ್ಲದ ಎಲ್ಲ ಅರ್ಹ 94ಸಿ ಅರ್ಜಿಗಳು ವಿಲೇವಾರಿ ಆಗಬೇಕು. ಪ್ರತಿ ಗ್ರಾಮದಲ್ಲಿ ಯಾವುದೇ ಸಮಸ್ಯೆ, ತಕರಾರು ಇರದ ಅರ್ಜಿಗಳು ಶೂನ್ಯ ವಾಗಿರಬೇಕು ಎಂದು ನಿರ್ದೇಶಿದರು.
ಇದಕ್ಕಾಗಿ ಜನವರಿಗೆ ತಿಂಗಳ ಎರಡನೇ ವಾರದಲ್ಲಿ 94 ಸಿ ಕಡತ ವಿಲೇವಾರಿ ಸಪ್ತಾಹ ಹಮ್ಮಿಕೊಂಡು ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ವಹಿಸಲು ಸೂಚನೆ ನೀಡಿದರು.

ಸಾಕಷ್ಟು ಕಡತಗಳು ತಾಲೂಕು ಕಚೇರಿಯಲ್ಲಿ ಬಾಕಿ ಇರುವುದು ಕಂಡು ಬಂದಿದೆ. ಸುಮಾರು 80 ಕಡತಗಳಿಗೆ 3 ಬಿ ವಿಚಾರಣೆ ಬಾಕಿ ಇದೆ. 3ಬಿ ವಿಚಾರಣೆ ತ್ವರಿತ ಗೊಳಿಸಬೇಕು. ಇದಕ್ಕಾಗಿ ವಿಶೇಷವಾಗಿ ಅಂದೋಲನ ಮಾದರಿಯಲ್ಲಿ ಕಾರ್ಯ ಯೋಜನೆ ಹಾಕಿ ಕೊಳ್ಳಲು ತಹಸೀಲ್ದಾರರಿಗೆ ಸೂಚನೆ ನೀಡಿದರು.
ಅಂತಿಮವಾಗಿ ಜನರ ಮನೆ ಬಾಗಿಲಿಗೆ ಹೋಗಿ ಅವರಿಗೆ ಹಕ್ಕು ಪತ್ರ ಸಿಗುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಹಾಗಾಗಿ ಗ್ರಾಮ ಆಡಳಿತ ಅಧಿಕಾರಿಗಳು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಲು ತಿಳಿಸಿದರು. ಸಮಸ್ಯಾತ್ಮಕವಲ್ಲದ ಎಲ್ಲ ಅರ್ಜಿಗಳು ವಿಲೇವಾರಿ ಆದ ನಂತರ ಸಾರ್ವಜನಿಕ ಅದಾಲತ್ ಗಳನ್ನು ಕೈಗೊಂಡು ಯಾವೊಬ್ಬ ಅರ್ಹ ಫಲನುಭವಿಯೂ ಭೂಮಿ ಹಕ್ಕು ವಂಚಿತರಾಗದೆ ಇರುವ ಬಗ್ಗೆ ವಿಶೇಷ ಆಂದೋಲನ ರೂಪಿಸಲಾಗುವುದು ಇದಕ್ಕೆ ಎಲ್ಲರೂ ಅಗತ್ಯ ಸಹಕಾರ ನೀಡುವುದು ಹಾಗೂ ಈಗಿನಿಂದಲೇ ತಮ್ಮ ತಮ್ಮ ಹಂತಗಳಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲು ಸೂಚಿಸಿದರು.

ವಂಡ್ಸೆ ಹೋಬಳಿಯಲ್ಲಿ ಇರುವ ಅಕ್ರಮ ಸಕ್ರಮ ಬಗರ್ ಹುಕುಂ ನಮೂನೆ 50,ನಮೂನೆ 53 ಹಾಗೂ ನಮೂನೆ 57 ರಡಿ ಅರ್ಹ ಅರ್ಜಿಗಳು ಸುಮಾರು 409 ಇದ್ದು, ಈ ಎಲ್ಲಾ ಅರ್ಜಿಗಳನ್ನು ತಂತ್ರಾಂಶಕ್ಕೆ ಅಳವಡಿಸಿ ಗ್ರಾಮ ಆಡಳಿತ ಅಧಿಕಾರಿ ಗಳು ಹಂತದಿಂದ ಕಂದಾಯ ನಿರೀಕ್ಷಕರ ಹಂತ ಹಾಗೂ ಅಲ್ಲಿಂದ ಮುಂದಿನ ಹಂತಕ್ಕೆ ಅಪ್ ಲೋಡ್ ಮಾಡಲು ಕ್ರಮ ವಾಗಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ಉತ್ತಮ ಕೆಲಸ ನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚಿನ ಕರ್ತವ್ಯ ಪರತೆಯಿಂದ ಕಾರ್ಯ ನಿರ್ವಹಿಸಲು ಸೂಚಿಸಿದರು*ಹಾಗೂ ಅಕ್ರಮ ಸಕ್ರಮ ಅರ್ಜಿಗಳನ್ನು ತಂತ್ರಾಂಶಕ್ಕೆ ಅಳವಡಿಸುವಾಗ ಏನೇ ತಾಂತ್ರಿಕ ಸಮಸ್ಯೆಗಳು ಉದ್ಭವವಾದಲ್ಲಿ ತನ್ನ ಗಮನಕ್ಕೆ ತರಲು ತಿಳಿಸಿದರು.
ಕುಂದಾಪುರ ತಾಲೂಕು ತಹಸೀಲ್ದಾರ್ ರರು, ಉಪ ತಹಶೀಲ್ದಾರರು, ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Related Articles

error: Content is protected !!