ಬೈಂದೂರು : ವಿಧಾನ ಸಭಾ ಕ್ಷೇತ್ರದ ಬೈಂದೂರು ತಾಲೂಕಿನ ನಾಡ ಗ್ರಾಮದಲ್ಲಿ ಈಗಾಗಲೇ ಗ್ರಾಮ ಪಂಚಾಯತ್ ಮೂಲಕ ಕೇಂದ್ರ ಸರಕಾರದ ನರೇಗಾ ಯೋಜನೆ ಹಾಗೂ ಇತರೆ ಅನುದಾನದಡಿ ಗೋಮಾಳ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಇದೀಗ ಕಂಬದಕೋಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕ್ಷೇತ್ರದ 2 ನೇ ಗೋಮಾಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ.
ಗೋಮಾಳ ಜಾಗದ ಸುತ್ತ ಕಂದಕ ನಿರ್ಮಾಣ ಮಾಡಲಾಗುತ್ತಿದ್ದು, ಒಟ್ಟು 13 ಮಂದಿ ನರೇಗಾ ಕೂಲಿ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿಕೊಂಡಿದ್ದಾರೆ. ಗೋಮಾಳ ಅಭಿವೃದ್ಧಿಯಿಂದ ಸ್ಥಳೀಯ ಗೋವುಗಳಿಗೆ ನೆರವಾಗಲಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಗೋಮಾಳ ಗುರುತಿಸುವಿಕೆ ಪ್ರಕ್ರಿಯೆ ನಡೆದಿದೆ ಕಳೆದೊಂದು ವರ್ಷದಿಂದ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಸ್ಥಳೀಯ ಗ್ರಾಮಾಡಳಿತದ ಸಹಕಾರದೊಂದಿಗೆ ಕ್ಷೇತ್ರದ ಇನ್ನಷ್ಟು ಗೋಮಾಳಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದ್ದಾರೆ.