ಬೈಂದೂರು : ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಬೈಂದೂರು ತಾಲೂಕು ಕಚೇರಿಯಲ್ಲಿ ಬೈಂದೂರು ತಾಲೂಕಿನ ಅರ್ಹ ಕೃಷಿಕರಿಗೆ ವಿವಿಧ ಸುಧಾರಿತ ಕೃಷಿ ಯಂತ್ರೋಪಕರಣಗಳನ್ನು ವಿತರಿಸಿದರು.
ನಂತರ ಮಾತನಾಡಿ, ಕೃಷಿ ಚಟುವಟಿಕೆಗಳು ಪ್ರಸ್ತುತ ಕಡಿಮೆಯಾಗುತ್ತಿದ್ದರೂ ಹಿರಿಯ ಕೃಷಿಕರೆಲ್ಲರೂ ಇಂದಿಗೂ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅವರಲ್ಲಿ ಇರುವಂತಹ ಕೃಷಿ ಉತ್ಸಾಹ ಇಂದಿನ ಪೀಳಿಗೆಯ ಯುವ ಜನರಲ್ಲಿ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ.
ಇಂದು ಆಧುನಿಕ ಕೃಷಿ ಯಂತ್ರೋಪ ಕರಣಗಳು ಸಬ್ಸಿಡಿ ದರದಲ್ಲಿ ಸಿಗುತ್ತಿದ್ದರೂ ಅದನ್ನು ಪಡೆದು ಕೊಳ್ಳಲು ರೈತರು ಮನಸ್ಸು ಮಾಡುತ್ತಿಲ್ಲ. ಹಾಗಾಗಿ ಕೃಷಿಯಲ್ಲಿ ತೊಡಗಿಸಿ ಕೊಂಡಿರುವ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣಗಳ ಅಗತ್ಯ ವಿದ್ದಲ್ಲಿ ರೈತ ಸಂಪರ್ಕ ಕೇಂದ್ರ ಗಳನ್ನು ಸಂಪರ್ಕಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆ ಗಳ ಸದುಪಯೋಗ ಪಡಿಸಿ ಕೊಳ್ಳಬಹುದಾಗಿದೆ ಎಂದರು.
19 ರೈತರಿಗೆ ವಿವಿಧ ಸವಲತ್ತು ವಿತರಣೆ :
ಬೈಂದೂರು ಹೋಬಳಿಯ ಸುಮಾರು 8 ಫಲಾನುಭವಿಗಳಿಗೆ ಪವರ್ ಸ್ಪ್ರೇಯರ್, 4 ಫಲನುಭವಿಗಳಿಗೆ ಪವರ್ ವೀಡರ್, 2 ಫಲಾನುಭವಿಗಳಿಗೆ ಪವರ್ ಟಿಲ್ಲರ್, 1 ಫಲಾನುಭವಿಗಳಿಗೆ ನಾಟಿಯಂತ್ರ, 4 ಫಲನುಭವಿಗಳಿಗೆ ಪಂಪ್ ಸೆಟ್ ಹಾಗೂ ಪೈಪ್ ಲೈನ್ ಗಳನ್ನು ಇದೇ ಸಂದರ್ಭದಲ್ಲಿ ಶಾಸಕರು ವಿತರಿಸಿ ಶುಭ ಹಾರೈಸಿದರು.

