ಬೈಂದೂರು : ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ 2025-26 ನೇ ಸಾಲಿನಲ್ಲಿ ಉಚಿತ ಶೂ ಸಾಕ್ಸ್ ವಿತರಣೆ ಕೂಡಲೇ ಮಾಡಬೇಕು. ಈ ಬಗ್ಗೆ ವಿಳಂಬ ಧೋರಣೆ ಸರಿಯಲ್ಲ ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ವಿಧಾನಸಭೆಯಲ್ಲಿ ಅವರು ಪ್ರಶ್ನಿಸಿ, ಶಾಲೆ ಪ್ರಾರಂಭವಾಗಿ 3 ತಿಂಗಳು ಕಳೆದರೂ ಈವರೆಗೂ ಶೂ ಸಾಕ್ಸ್ ಒದಗಿಸಿಲ್ಲ ಎಂದರು. ಶಾಸಕರು ಕೇಳಿದ ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು, ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ 2025- 26 ನೇ ಸಾಲಿನಲ್ಲಿ ಉಚಿತ ಶೂ ಸಾಕ್ಸ್ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಮಾಡಲು ಕ್ರಮವಹಿಸಲಾಗಿದೆ. ವಿದ್ಯಾ ವಿಕಾಸ ಯೋಜನೆಯಡಿ ಈ ಉದ್ದೇಶ ಕ್ಕಾಗಿ 111 ಕೋಟಿ ಅನುದಾನ ಒದಗಿಸಲಾಗಿದೆ. ಈ ಅನುದಾನವನ್ನು ಪ್ರಥಮ ಬಾರಿಗೆ ಬಿಎಂಎಸ್ ತಂತ್ರಾಂಶದ ಮೂಲಕ ರಾಜ್ಯ ಖಜಾನೆಯಿಂದ ನೇರವಾಗಿ ಎಸ್ ಡಿಎಂಸಿ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು.

