ಬೈಂದೂರು : ರಾಜ್ಯದಲ್ಲಿರುವ ಕೆರೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಮ್ಮಿಕೊಂಡ ಯೋಜನೆಗಳು ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಇಲಾಖೆಗಳಿಗೆ ನೀಡಿರುವ ಬಗ್ಗೆ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ವಿಧಾನಸಭೆಯಲ್ಲಿ ಕೇಳಿದ ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ಸಣ್ಣ ನೀರಾವರಿ ಸಚಿವರು ಕೆರೆಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದು ನಿರಂತರ ಪ್ರಕ್ರಿಯೆಯಾಗಿದ್ದು ಪ್ರತಿ ವರ್ಷ ಸಣ್ಣ ನೀರಾವರಿ ಇಲಾಖೆಗೆ ವಿವಿಧ ಲೆಕ್ಕ ಶೀರ್ಷಿಕೆ ಅನುದಾನ ಹಾಗೂ ಲಭ್ಯವಾಗುವ ಅನುದಾನವನ್ನು ಆಧರಿಸಿ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾದ / ನಿರ್ಮಿಸಲಾಗುತ್ತಿರುವ ಕೆರೆಗಳ ಮೂಲ ಉದ್ದೇಶ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿರುತ್ತದೆ.ಆದರೆ ಬರಗಾಲದ ಸಂದರ್ಭದಲ್ಲಿ ನೀರಿನ ಅಭಾವ ಉಂಟಾದಾಗ ಸದರಿ ಕೆರೆಗಳಲ್ಲಿ ಸಂಗ್ರಹವಾಗಿರುವ ನೀರನ್ನು ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಜನ ಜಾನುವಾರುಗಳ ಕುಡಿಯುವ ನೀರಿಗಾಗಿ ಉಪಯೋಗಿಸಲಾಗುತ್ತಿದೆ ಅಲ್ಲದೆ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯ ಕೆಲವು ಕೆರೆಗಳ ನೀರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಬಹು ಗ್ರಾಮ ಕುಡಿಯುವ ನೀರಿಗಾಗಿ ಉಪಯೋಗಿಸಲಾಗುತ್ತಿದೆ ಎಂದರು.
*ಪ್ರಸ್ತುತ ರಾಜ್ಯದಲ್ಲಿ ಒಟ್ಟು 13,049 ಕೆರೆಗಳ ಒತ್ತುವರಿ*
ರಾಜ್ಯದಲ್ಲಿ ಇರುವ ಒಟ್ಟು ಕೆರೆಗಳ ಪ್ರಸ್ತುತ ಪರಿಸ್ಥಿತಿ ಹಾಗೂ ಒತ್ತುವರಿಗಳ ಬಗ್ಗೆ ಬೈಂದೂರು ಶಾಸಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ಇರುವ ಒಟ್ಟು ಕೆರೆಗಳು 41,849 ಅದರಲ್ಲಿ 13,049 ಕೆರೆಗಳನ್ನು ಒತ್ತುವರಿ ಎಂದು ಗುರುತಿಸಲಾಗಿದೆ.6965 ಕೆರೆಗಳ ಒತ್ತುವರಿ ತೆರವಾಗಿದೆ ಹಾಗೂ 6084 ಕೆರೆಗಳ ಒತ್ತುವರಿ ತೆರವಿಗೆ ಬಾಕಿ ಇದೆ. ಕಂದಾಯ ಇಲಾಖೆಯ ಸಹಯೋಗದೊಂದಿಗೆ ಸಂಬಂಧಿಸಿದ ಉಸ್ತುವಾರಿ ಇಲಾಖೆಗಳು ಕೆರೆಗಳ ಒತ್ತುವರಿಯನ್ನು ಕಂದಾಯ ಸರ್ವೆ ಕೈಗೊಂಡು, ಒತ್ತುವರಿಯನ್ನು ಗುರುತಿಸಿ ನಿಯಮಾನುಸಾರ ತೆರವುಗೊಳಿಸಲಾಗುತ್ತಿದೆ ಇದನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯನ್ನು ರಚಿಸಿರುವ ಕೆರೆ ಸಂರಕ್ಷಣಾ ಸಮಿತಿಯಲ್ಲಿ ಪರಿಶೀಲಿಸಿ ಪ್ರಗತಿಯ ವರದಿಯನ್ನು ಸಲ್ಲಿಸಲಾಗುತ್ತಿದೆ ಎಂದು ಸಚಿವರು ಸದನದಲ್ಲಿ ಮಾಹಿತಿ ನೀಡಿದ್ದಾರೆ
ರಾಜ್ಯದಲ್ಲಿ ಪ್ರಸ್ತುತ ಒಟ್ಟು ಇರುವ 41,849 ಕೆರೆಗಳ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ -32,068 ಕೆರೆಗಳು, ಬೃಹತ್ ನೀರಾವರಿ ಇಲಾಖೆಯಡಿ – 2048 ಕೆರೆಗಳು, ಸಣ್ಣ ನೀರಾವರಿ ಇಲಾಖೆಯಡಿ – 3788 ಕೆರೆಗಳು, ನಗರಾಭಿವೃದ್ಧಿ ಇಲಾಖೆಯಡಿ (ಬಿಡಿಎ & ಬಿಬಿಎಂಪಿ) – 206 ಕೆರೆಗಳುನಗರ ಸ್ಥಳೀಯ ಸಂಸ್ಥೆಗಳಡಿ – 1079, ಅರಣ್ಯ, ಕಂದಾಯ ಮತ್ತು ಇತರೆ ಇಲಾಖೆಯಡಿ – 2660 ಕೆರೆಗಳು ಇರುವ ಬಗ್ಗೆ ಸಚಿವರು ಮಾಹಿತಿ ನೀಡಿದ್ದಾರೆ.

