ನವದೆಹಲಿ: ಬಿಜೆಪಿ ಹೈಕಮಾಂಡ್ನಿಂದ ಮಾಜಿ ಸಚಿವ ಹಾಗೂ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಬುಲಾವ್ ನೀಡಿದ್ದು, ‘ಗೋ ಬ್ಯಾಕ್ ಶೋಭಕ್ಕ’ ಅಭಿಯಾನ ದೆಹಲಿ ಮಟ್ಟದಲ್ಲಿ ಚರ್ಚೆಯಾದಂತೆ ಕಾಣುತ್ತಿದೆ. ದೆಹಲಿಗೆ ತೆರಳಿದ ರವಿ ಅವರು, ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಸಂಸದೆ ಶೋಭಾ ಕರಂದ್ಲಾಜೆ ಗೆ ಟಿಕೆಟ್ ನೀಡಬಾರದು ಎಂದು ಬಿಜೆಪಿ ಕಾರ್ಯಕರ್ತರು ಕಳೆದೊಂದು ವಾರದಿಂದ ‘ಗೋ ಬ್ಯಾಕ್ ಶೋಭಕ್ಕ’ ಅಭಿಯಾನ ನಡೆಸಿದ್ದು, ಚುನಾವಣಾ ಸಮಿತಿ ಸಭೆ ನಡೆದಾಗ ಪಕ್ಷದ ಕಚೇರಿಯಲ್ಲೇ ಪ್ರತಿಭಟನೆ ನಡೆಸಿದ್ದರು. ಈ ನಡುವೆ ಇದೀಗ ಸಿ.ಟಿ. ರವಿ ಅವರಿಗೆ ಪಕ್ಷದ ಹೈಕಮಾಂಡ್ ಧಿಡೀರ್ ಬರಹೇಳಿದ್ದು ತೀವ್ರ ಕುತುಹಲ ಕೆರಳಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿರುವ ರವಿ ಅಭಿಯಾನ ಹಾಗೂ ಟಿಕೆಟ್ ಬಗ್ಗೆ ಚರ್ಚೆ ಮಾಡಿರುವ ಸಾಧ್ಯತೆಗಳಿವೆ.