ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾ.26ರಂದು ರಾತ್ರಿ ಶಿರ್ವ ಜಾರಂದಾಯ ದೈವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಭೇಟಿ ನೀಡಿದ ಜೆ.ಪಿ. ಹೆಗ್ಡೆ ಅವರು ತಡರಾತ್ರಿಯವರೆಗೂ ದೈವಸ್ಥಾನದ ಆಡಳಿತ ಮಂಡಳಿಯ ಜೊತೆ ಸಭೆ ನಡೆಸಿದ್ದಾರೆ ಎಂದು ಚುನಾವಣಾ ಪರಿವೀಕ್ಷಣಾ ತಂಡಕ್ಕೆ ದೂರು ಬಂದಿತ್ತು. ರಾತ್ರಿ 11.30 ಗಂಟೆಗೆ ಅಧಿಕಾರಿ ವಿನ್ಸೆಂಟ್ ವಿನೋದ್ ಡಿಸೋಜ ಸ್ಥಳಕ್ಕೆ ಭೇಟಿ ನೀಡಿದಾಗ, ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಭೆ ನಡೆಸಿ ಸಾರ್ವಜನಿಕರ ಮೇಲೆ ಪ್ರಭಾವ ಬೀರಿರುವುದು ಪತ್ತೆಯಾಗಿದ್ದು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.