ಕುಂದಾಪುರ : ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್, ಯೂತ್ ಫಾರ್ ಸೇವಾ, ಭಾರತೀಯ ಕಿಸಾನ್ ಸಂಘ, ಕ್ರೀಡಾ ಭಾರತೀ, ಸ್ವದೇಶಿ ಜಾಗರಣ ಮಂಚ್ ಮತ್ತು ಸೈಕಲ್ ವರ್ಲ್ಡ್ ಈ ಎಲ್ಲಾ ಸಂಸ್ಥೆಗಳ ಸಹಕಾರ, ಸಹಯೋಗ ಜಂಟಿ ಪ್ರಾಯೋಜಕತ್ವದಲ್ಲಿ ಆರಂಭಗೊಂಡ ಸೈಕಲ್ ಜಾಥಾ 7ನೇ ದಿನವಾದ 19/12/2025 ಕುಂದಾಪುರ ತಲುಪಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾದ ರಾಘವೇಂದ್ರ ಪಂಡಿತ್, ಬಿ ಅಣ್ಣಪ್ಪ ಶೆಟ್ಟಿಗಾರ್, ಸಂದೇಶ ಕಾಮತ್, ಭಾರತೀಯ ಮಜದೂರ್ ಸಂಘದ ಪ್ರಮುಖರಾದ ಸತೀಶ ಪ್ರಭು ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕರ್ತರಾದ ಶ್ರೀಮತಿ ಅಂಜನಾ ಪಂಡಿತ್ ಸೈಕಲ್ ಸವಾರರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ಸ್ವದೇಶಿ ಬಳಸಿ ದೇಶ ಬೆಳೆಸಿ ಎಂಬ ಘೋಷ ವಾಕ್ಯದಡಿ ಹೊರಟ ಜಾಥಾ ಕರ್ನಾಟಕ ರಾಜ್ಯದಾದ್ಯಂತ ಸಂಚರಿಸಿ ಒಟ್ಟು 39 ದಿನಗಳಲ್ಲಿ 3600 ಕಿ.ಮೀ ಕ್ರಮಿಸುವ ಗುರಿ ಹೊಂದಿದೆ.
ನಿವೃತ್ತ ಸೇನಾನಿಗಳು, ಹಿರಿಯ ವಿಜ್ಞಾನಿಗಳು, ಸರಕಾರಿ ಅಧಿಕಾರಿಗಳು, ಮಹಿಳೆಯರು ಸೇರಿದಂತೆ 75ಕ್ಕೂ ಅಧಿಕ ವಯಸ್ಸಿನ ಹಿರಿಯ ನಾಗರಿಕರೂ ಜೊತೆಯಾಗಿರುವುದು ಈ ತಂಡದ ವಿಶೇಷ. ಸ್ವದೇಶಿ ಉತ್ಪನ್ನಗಳ ಬಳಕೆಯ ಅಗತ್ಯ, ಸಾವಯವ ಕೃಷಿಯ ಮಹತ್ವ, ಪಾಶ್ಚಾತ್ಯ ಸಂಸ್ಕೃತಿಯನ್ನು ಅಂಧಾನುಕರಣೆ ಮಾಡುತ್ತಿರುವ ಸಮಯದಲ್ಲಿ ಭಾರತೀಯ ಸಂಸ್ಕೃತಿಯತ್ತ ಆಕರ್ಷಿತರಾಗುತ್ತಿರುವ ವಿದೇಶಿಗರು ಇತ್ಯಾದಿ ವಿಷಯಗಳ ಬಗ್ಗೆ ನಿವೃತ್ತ ಸೇನಾ ಬ್ರಿಗೇಡಿಯರ್ ರವಿ ಮುನಿಸ್ವಾಮಿ ವಿವರಿಸಿದರು. ಸೈಕಲ್ ಯಾತ್ರಿಗಳ ಮುಂದಿನ ಪ್ರಯಾಣಕ್ಕೆ ಶುಭಾಶಯಗಳೊಂದಿಗೆ ಬೀಳ್ಕೊಡಲಾಯಿತು.

