Home » ಸುಭದ್ರ ಸಮುದ್ರ ತೀರದಿಂದ ದೇಶ ಸಮೃದ್ದ
 

ಸುಭದ್ರ ಸಮುದ್ರ ತೀರದಿಂದ ದೇಶ ಸಮೃದ್ದ

- ಡೆಪ್ಯೂಟಿ ಕಮಾಂಡರ್ ವಿಭು ಸಿಂಗ್

by Kundapur Xpress
Spread the love

ಕುಂದಾಪುರ : ದೇಶದಲ್ಲಿ ಶೇ.95 ರಷ್ಟು ವ್ಯಾಪಾರ ವಹಿವಾಟುಗಳು ಸಮುದ್ರ ಮಾರ್ಗದ ಮೂಲಕವೇ ನಡೆಯುತ್ತದೆ. ಹೀಗಾಗಿ ಸಮುದ್ರತೀರದ ಭದ್ರತೆ ನಿಶ್ಚಿತವಾಗಿದ್ದರೆ ದೇಶದ ಸಮೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ. ಕರಾವಳಿ ತೀರದ ಭದ್ರತೆಯನ್ನು ಶಾಶ್ವತವಾಗಿ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಿಐಎಸ್ಎಫ್ ಡೆಪ್ಯೂಟಿ ಕಮಾಂಡರ್ ವಿಭು ಸಿಂಗ್ ಹೇಳಿದರು

ಸಿಐಎಸ್‌ಎಫ್ ನೇತೃತ್ವದಲ್ಲಿ ‘ಸುರಕ್ಷಿತ ತಟ, ಸಮೃದ್ಧ ಭಾರತ’ ಪರಿಕಲ್ಪನೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಗುಜರಾತ್‌ನಿಂದ ಕನ್ಯಾಕುಮಾರಿ ತನಕ ಆರಂಭಗೊಂಡಿರುವ ಸೈಕಲ್ ಜಾಥಾ ಬುಧವಾರ ಕುಂದಾಪುರಕ್ಕೆ ಆಗಮಿಸಿದ ಬಳಿಕ ಸೇನಾಭಿಮಾನಿ ಬಳಗದ ವತಿಯಿಂದ ಇಲ್ಲಿನ ಮೊಗವೀರ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಕರಾವಳಿ ಮಾತ್ರವಲ್ಲದೆ ಇತರೆ ಭಾಗಗಳಲ್ಲಿ ಏನೇ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಬಂದ ಕೂಡಲೇ ತಕ್ಷಣವೇ ತಂದೆ-ತಾಯಿ ಅಥವಾ ಪೊಲೀಸ್ ಇಲಾಖೆಗೆ, ಮಾಹಿತಿ ಮುಟ್ಟಿಸಬೇಕು. ಯುವ ಜನತೆ ಯಾವುದೇ ಕಾರಣಕ್ಕೂ ಮಾದಕ ವ್ಯಸನಗಳಿಗೆ ಬಲಿಯಾಗಬಾರದು ಎಂದರು.

ಸಮಾರಂಭದಲ್ಲಿ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಸಹಾಯಕ ಕಮಾಂಡೆಂಟ್‌ಗಳಾದ ರಾಮಮೂರ್ತಿ ಕೌಂಡಲ್, ಸಾಯಿ ನಾಯಕ್, ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಮಹೇಶ್ಚಂದ್ರ,  ತಹಸೀಲ್ದಾರ್‌ ಪ್ರದೀಪ್‌ ಕುರ್ಡೇಕರ್, ಪುರಸಭೆಯ ಅಧ್ಯಕ್ಷ ಮೋಹನ್‌ ದಾಸ್ ಶೆಣೈ, ನಗರ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಪುರಸಭೆಯ ಮುಖ್ಯಾಧಿಕಾರಿ ಆನಂದ್ ಜೆ, ಮೊಗವೀರ ಯುವ ಸಂಘಟನೆಯ ಉದಯ್ ಕುಮಾರ್ ಹಟ್ಟಿಯಂಗಡಿ ಇದ್ದರು.

ಸೈಕಲ್ ‌ಜಾಥಾದ ಮೂಲಕ ಕುಂದಾಪುರಕ್ಕೆ ಆಗಮಿಸಿದ ಯೋಧರನ್ನು ಕುಂದಾಪುರದ ಸಂಗಮ್ ಜಂಕ್ಷನ್‌ನಲ್ಲಿ ಸ್ವಾಗತಿದ ಬಳಿಕ, ಭಂಡಾರ್ಕಾರ್ಸ್ ಹಾಗೂ ಬಿ.ಬಿ ಹೆಗ್ಡೆ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ದೇಶಾಭಿಮಾನದ ಘೋಷಣೆಗಳನ್ನು ಕೂಗುತ್ತಾ ಚಂಡೆವಾದ್ಯಗಳ ಭವ್ಯ ಮೆರವಣಿಗೆಯೊಂದಿಗೆ ಚಿಕನ್‌ಸಾಲ್ ರಸ್ತೆಯ ಮಾರ್ಗವಾಗಿ ಮೊಗವೀರ ಭವನಕ್ಕೆ ಬರಮಾಡಿಕೊಂಡರು. ಸೇನಾಭಿಮಾನಿ ಬಳಗದ ರಾಜೇಶ್ ಕಾವೇರಿ ಸ್ವಾಗತಿಸಿದರು. ಭಂಡಾರ್ಕಾರ್ಸ್ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿನಿ ಸಿಂಧು ಕಾರ್ಯಕ್ರಮ ನಿರೂಪಿಸಿದರು.

 

Related Articles

error: Content is protected !!