ಮಂಗಳೂರು: ದ.ಕ. ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸೇನಾಧಿಕಾರಿ, ಯುವ ನಾಯಕ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಹೆಸರನ್ನು ಪಕ್ಷದ ವರಿಷ್ಠರು ಘೋಷಣೆ ಮಾಡಿದ್ದಾರೆ. ಈ ಮೂಲಕ ಕೇಸರಿಯ ಭದ್ರಕೋಟೆಯಲ್ಲಿ ಹೊಸ ಮುಖಕ್ಕೆ ಆರ್ಎಸ್ ಎಸ್ ಮಣೆ ಹಾಕಿದಂತಾಗಿದೆ. ಬುಧವಾರ ದೆಹಲಿಯಿಂದ ಹೊರಡಿಸಲಾದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಹೆಸರು ಪ್ರಕಟ ಮಾಡುವುದರೊಂದಿಗೆ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಅವಕಾಶ ನಿರಾಕರಿಸಲಾಗಿದೆ.
ಈ ಬಾರಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಬದಲಾವಣೆ ಆಗಲೇ ಬೇಕು ಎಂದು ಪಕ್ಷ ಕಾರ್ಯಕರ್ತರ ಅಭಿಯಾನ ಹಾಗೂ ಸಂಘಪರಿವಾರ ಕೂಡ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಅಭ್ಯರ್ಥಿ ಬದಲಾವಣೆಗೆ ಅಂಕಿತ ಹಾಕಿದ್ದಾರೆ. ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಸ್ವಯಂ ನಿವೃತ್ತಿ ಹೊಂದಿರುವ ಕ್ಯಾ.ಬ್ರಿಜೇಶ್ ಚೌಟ ಅವರು ಸಮಾಜಸೇವೆಗೆ ಇಳಿದಿದ್ದರು.