Home » ಗುರುಗಳನ್ನು ಗೌರವಿಸುವ ಸತ್ಕಾರ್ಯ ಪ್ರಶಂಸನೀಯ
 

ಗುರುಗಳನ್ನು ಗೌರವಿಸುವ ಸತ್ಕಾರ್ಯ ಪ್ರಶಂಸನೀಯ

: ಯಶ್ಪಾಲ್ ಸುವರ್ಣ

by Kundapur Xpress
Spread the love

ಉಡುಪಿ : ಗುರಿಯೆಡೆಗೆ ದಾರಿ ತೋರಿ ಸುಜ್ಞಾನವನ್ನು ನೀಡಿ ಮುನ್ನಡೆಸಿದ ಗುರುಗಳನ್ನು ಗೌರವಿಸುವ ಸತ್ಕಾರ್ಯ ಪ್ರಶಂಸನೀಯ ಎಂದು ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು.

ಅವರು ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ಅಧ್ಯಕ್ಷತೆಯಲ್ಲಿ ನಗರ ಮಹಿಳಾ ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಕರ ಸಾಧನೆಯ ಆಧಾರದಲ್ಲಿ ಸರಕಾರ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಘೋಷಿಸುವ ಪರಿಪಾಠ ಇದ್ದರೂ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಜಿ. ರಾಮಕೃಷ್ಣ ಅವರ ರಾಜ್ಯ ಮಟ್ಟದ ‘ಉತ್ತಮ ಶಿಕ್ಷಕ ಪ್ರಶಸ್ತಿ’ಯನ್ನು ಓಲೈಕೆ ರಾಜಕಾರಣದಿಂದ ತಡೆಹಿಡಿದಿರುವುದು ಖಂಡನೀಯ. ಕಾಂಗ್ರೆಸ್ ತುಷ್ಟೀಕರಣ ನೀತಿಯ ರಾಜಕಾರಣವನ್ನು ಶೈಕ್ಷಣಿಕ ಕ್ಷೇತ್ರಕ್ಕೂ ಪಸರಿಸುವ ಮೂಲಕ ಶಿಕ್ಷಕ ವೃಂದಕ್ಕೇ ಅಪಚಾರ ಎಸಗಿದೆ. ಶಿಕ್ಷಕರ ಜೊತೆಗೆ ಉಡುಪಿ ಜಿಲ್ಲೆಯನ್ನು ಅವಮಾನಿಸಿರುವ ರಾಜ್ಯ ಸರಕಾರದ ನಡೆಯ ವಿರುದ್ಧ ಹೋರಾಟ ಅನಿವಾರ್ಯವೆನಿಸಿದೆ ಎಂದು ಅವರು ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಮಾತನಾಡಿ, ಜೀವನದ ಯಶಸ್ಸಿಗೆ ವಿದ್ಯೆ ಕಲಿಸಿದ ಗುರುಗಳ ಆಶೀರ್ವಾದ ಅತೀ ಅಗತ್ಯ. ಈ ನಿಟ್ಟಿನಲ್ಲಿ ನಗರ ಮಹಿಳಾ ಮೋರ್ಚಾ ಹಮ್ಮಿಕೊಂಡಿರುವ ಸಾಧಕ ಶಿಕ್ಷಕರಿಗೆ ಗುರುವಂದನೆ ಸಲ್ಲಿಸುವ ಕಾರ್ಯಕ್ರಮ ಅಭಿನಂದನೀಯ ಎಂದರು.

ವಿವಿಧ ಕ್ಷೇತ್ರಗಳ ಸಾಧಕರಾದ ಶಿಕ್ಷಣ – ಸುಬ್ರಾಯ ಉಪಾಧ್ಯಾಯ, ಯಕ್ಷಗಾನ – ರತ್ನಾಕರ ಶೆಣೈ, ಯೋಗ – ಅನಿತಾ ಡಿ ಸುವರ್ಣ, ಈಜು – ಗಂಗಾಧರ್ ಕಡೆಕಾರ್, ಭಗವದ್ಗೀತೆ – ಮೀನಾಕ್ಷಿ ಪೈ, ಸಂಗೀತ – ವಿನುತಾ ಆಚಾರ್ಯ, ಕೀಬೋರ್ಡ್ – ರವಿರಾಜ್ ಉಪಾಧ್ಯಾಯ, ಕ್ರೀಡೆ – ಗಣೇಶ್ ಕೋಟ್ಯಾನ್, ಹುಲಿವೇಷ – ಶಿವಣ್ಣ, ತಾಲೀಮು ಕವಾಯತ್ – ಸಿರಿಲ್ ನೊರೋಹ್ನ ಇವರನ್ನು ಶಾಲು ಹೊದೆಸಿ ಸನ್ಮಾನಿಸಲಾಯಿತು.

ಕನ್ನಡ ಜನಪದ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷೆಯಾಗಿ ನಿಯುಕ್ತಿಗೊಂಡಿರುವ ಉಡುಪಿ ನಗರ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಾಯಾ ಕಾಮತ್ ಮಣಿಪಾಲ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉಡುಪಿ ನಗರ ಮಂಡಲಾಧ್ಯಕ್ಷ ದಿನೇಶ್ ಅಮೀನ್, ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಪೆರಣಂಕಿಲ ಶ್ರೀಶ ನಾಯಕ್, ಜಿಲ್ಲಾ ವಕ್ತಾರೆ ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ನಿಕಟಪೂರ್ವ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ. ಶೆಟ್ಟಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಪ್ರಮುಖ್ ಗಿರೀಶ್ ಎಮ್. ಅಂಚನ್, ಉಡುಪಿ ಗ್ರಾಮಾಂತರ ಮಂಡಲಾಧ್ಯಕ್ಷ ರಾಜೀವ ಕುಲಾಲ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಪ್ರಧಾನ ಕಾರ್ಯದರ್ಶಿ ಅಭಿರಾಜ್ ಸುವರ್ಣ, ನಗರ ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ನಿತಿನ್ ಪೈ ಹಾಗೂ ಉಡುಪಿ ನಗರ ಮಹಿಳಾ ಮೋರ್ಚಾ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ನಗರಸಭಾ ಸದಸ್ಯರು ಮತ್ತು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಉಡುಪಿ ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಾಂತಿ ಮನೋಜ್ ಕಾರ್ಯಕ್ರಮ ನಿರೂಪಿಸಿ, ಸರೋಜಾ ಶೆಣೈ ವಂದಿಸಿದರು.

   

Related Articles

error: Content is protected !!