ಉಡುಪಿ : ಚುನಾವಣೆ, ಮತ ಬ್ಯಾಂಕ್ ದೃಷ್ಟಿಯಿಲ್ಲದೆ ದೇಶದ ಅಭಿವೃದ್ಧಿಗೆ ಪೂರಕವಾದ ಬಜೆಟ್‌ನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಸರಳ, ಪಾರದರ್ಶಕ, ಪ್ರೋತ್ಸಾಹದಾಯಕ ಆಯವ್ಯಯ ಪ್ರಧಾನಿ ಮೋದಿ ಕನಸಿನ ವಿಕಸಿತ ಭಾರತಕ್ಕೆ ವಿಕಸಿತ ಬಜೆಟ್ ಆಗಿದೆ ಎಂದು ಅವರು ನುಡಿದರು.
ಆರ್ಥಿಕ ಶಿಸ್ತು ತಪ್ಪದೆ ದೇಶದ ಜನರ ಭರವಸೆಯ ಜತೆಗೆ ರೈತರು, ಮಹಿಳೆಯರು, ಸಣ್ಣ ಉದ್ದಿಮೆದಾರರು, ಮಧ್ಯಮ ವರ್ಗದ ಜನರ ಆದಾಯ ಇಮ್ಮಡಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ದೇಶದ 100 ಹಿಂದುಳಿದ ಜಿಲ್ಲೆಗಳಲ್ಲಿ ಧನಧಾನ್ಯ ಕೃಷಿ ಯೋಜನೆ ಜಾರಿ ಮಹತ್ವದ್ದಾಗಿದ್ದು ಬೆಳೆ ಬದಲಾವಣೆ, ತರಕಾರಿ ಮತ್ತು ಫಲವಸ್ತು ಬೆಳೆಗೆ ಪ್ರೋತ್ಸಾಹ, ಹತ್ತಿ ಬಟ್ಟೆಗೆ ಪ್ರೋತ್ಸಾಹ, ರೈತರಿಗೆ ಬಡ್ಡಿ ರಹಿತ ಸಾಲದ ಮಿತಿ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ವರದಾನವಾಗಲಿದೆ.
ಐದು ವರ್ಷಗಳಲ್ಲಿ ಐದು ಕೋಟಿ ಸಣ್ಣ ಉದ್ದಿಮೆ ಸ್ಥಾಪನೆಗೆ ಪ್ರೋತ್ಸಾಹ, 5 ಲಕ್ಷ ಎಸ್‌ಸಿ/ಎಸ್‌ಟಿ ಮಹಿಳೆಯರ ಸಣ್ಣ ಘಟಕ ಉದ್ದಿಮೆ ಸ್ಥಾಪನೆ ಗುರಿ ಹಾಗೂ ಗೊಂಬೆ ಉದ್ದಿಮೆ, ಚರ್ಮ ಉದ್ದಿಮೆ, ಆಹಾರ ಉದ್ದಿಮೆ ಪ್ರೋತ್ಸಾಹ ಕ್ಕಾಗಿ ರಾಷ್ಟ್ರೀಯ ಉತ್ಪಾದನೆ ಮಿಷನ್ ಸ್ಥಾಪನೆ ಉದ್ಯಮ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಲಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ಶುದ್ಧ ನೀರು ಪೂರೈಕೆ ಯೋಜನೆ ಶೇ. 80 ಕಾರ್ಯಗತವಾಗಿದ್ದು ಶೇ. 100 ಸಾಧನೆಗೆ ಉದ್ದೇಶಿಸಲಾಗಿದೆ. 200 ಜಿಲ್ಲೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ, ಮೆಡಿಕಲ್ ಟೂರಿಸಂಗೆ ಉತ್ತೇಜನ, ಜೀವ ರಕ್ಷಕ ಔಷಧಗಳಿಗೆ ತೆರಿಗೆ ಕಡಿತ, 37 ಔಷಧಗಳನ್ನು ಉಚಿತವಾಗಿ ನೀಡುವ ಬಜೆಟ್ ಪ್ರಸ್ತಾಪ ಬಡರೋಗಿಗಳ ಜೀವ ಉಳಿಸಲಿದೆ ಎಂದರು ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ್ ಅಂಬಲಪಾಡಿ, ವಿಜಯ್ ಕುಮಾರ್ ಉದ್ಯಾವರ, ಪೆರ್ಣಂಕಿಲ ಶ್ರೀಶ ನಾಯಕ್, ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.