ಉಡುಪಿ : ಡಿಸೇಲ್ ಮತ್ತು ಪೆಟೋಲ್ ಬೆಲೆ ಏರಿಕೆಯಾದಾಗ ದಿನಸಿ ಸಾಮಾಗ್ರಿ, ತರಕಾರಿಗಳ ಬೆಲೆ ಏರಿಕೆಯಾಗುತ್ತದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ದಿವಾಳಿಯಾಗಿದೆ. ಇದರ ಹೊರೆಯನ್ನು ನಾಗರಿಕನ ಮೇಲೆ ಹೇರುತ್ತಿರುವ ದುಷ್ಟ ಕಾಂಗ್ರೆಸ್ ಸರಕಾರದ ನೀತಿಯೂ, ತನ್ನ ಶವ ಪೆಟ್ಟಿಗೆಗೆ ಹೊಡೆದುಕೊಂಡ ಕೊನೆಯ ಮೊಳೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಅವರು ಸೋಮವಾರ, ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಶಾಸಕನಾಗಿ ಒಂದು ವರ್ಷ ಕಳೆದರೂ ತನ್ನ ಕ್ಷೇತ್ರದಲ್ಲಿ ಯಾವುದೇ ಯೋಜನೆಯ ಗುದ್ದಲಿ ಪೂಜೆ, ಒಂದು ಕಿಮೀ ಹೊಸ ರಸ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನನ್ನು ಆರಿಸಿ ಕಳುಹಿಸಿದ ಜನತೆಗೆ ನಾನೇನು ಉತ್ತರ ಕೊಡಲಿ. ಇದು ನನ್ನೊಬ್ಬನ ಸಮಸ್ಯೆಯಲ್ಲ ರಾಜ್ಯದ ಕಾಂಗ್ರೆಸಿನ ಶಾಸಕರು ಸೇರಿದಂತೆ ಎಲ್ಲಾ 224 ಶಾಸಕರಿಗೂ ಈ ಸರಕಾರದಿಂದ ಸಮಸ್ಯೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.