ಉಡುಪಿ: ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ಸೇರಿದಂತೆ ಎಲ್ಲಾ ಬಸ್‌ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಕೆಗೆ ನೀಡಿರುವ ಕಾಲಾವಕಾಶವನ್ನು ಜೂನ್ 1ರವರೆಗೆ ವಿಸ್ತರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧ್ಯಕ್ಷತೆಯಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಬಸ್ ಮಾಲಕರ ಸಂಘದ ಪದಾಧಿಕಾರಿಗಳ ಜೊತೆಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಮಾರ್ಚ್ ತಿಂಗಳವರೆಗೆ ಶಾಲೆಗಳು ಹಾಗೂ ಮಕ್ಕಳಿಗೆ ಪರೀಕ್ಷೆಗಳು ನಡೆಯಲಿರುವುದರಿಂದ ಹಾಗೂ ಜಿಲ್ಲೆಯ ಖಾಸಗಿ ಸೇರಿದಂತೆ ಎಲ್ಲಾ ಬಸ್‌ಗಳಿಗೆ ಹೊಸದಾಗಿ ಬಾಗಿಲುಗಳನ್ನು ಅಳವಡಿಸಲು ಸಾಕಷ್ಟು ಸಂಖ್ಯೆಯಲ್ಲಿ ಗ್ಯಾರೇಜ್‌ಗಳು ಇಲ್ಲದೇ ಇರುವುದರಿಂದ ಬಸ್ ಚಾಲಕರು ಹಾಗೂ ಮಾಲಕರ ಕೋರಿಕೆಯ ಮೇರೆಗೆ ಫೋಲ್ಡಿಂಗ್ ಮಾದರಿಯ ಬಾಗಿಲುಗಳನ್ನು ಅಳವಡಿಸಲು ಜೂನ್ 1ರವರೆಗೆ ಸಮಯವನ್ನು ನೀಡಲಾಯಿತು ಎಂದು ಹೇಳಿದರು.
ಆದರೆ ಇಂದಿನಿಂದಲೇ ಎಲ್ಲಾ ಬಸ್‌ಗಳ ದೃಢತೆ ಸರ್ಟಿಫಿಕೇಟ್ (ಫಿಟ್‌ನೆಸ್ ಸರ್ಟಿಫಿಕೇಟ್-ಎಫ್‌ಸಿ)ಗಳನ್ನು ನವೀಕರಿಸಲಾಗುವುದು.ಇದಕ್ಕೆ ಮುನ್ನ ಬಸ್‌ಗೆ ಜೂನ್ 1ರೊಳಗೆ ಪೋಲ್ಡಿಂಗ್ ಮಾದರಿಯ ಬಾಗಿಲನ್ನು ಅಳವಡಿಸದಿದ್ದರೆ ಎಫ್‌ಸಿಯನ್ನು ರದ್ದುಪಡಿಸುವ ಷರತ್ತನ್ನು ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದರು. ಅಲ್ಲದೇ ಜೂನ್1ರ ಬಳಿಕ ಯಾವುದೇ ಬಸ್ ಸುಸಜ್ಜಿತ ಬಾಗಿಲನ್ನು ಅಳವಡಿಸಿಕೊಳ್ಳದೇ ಇದ್ದರೆ ಅದನ್ನು ಮುಟ್ಟು ಗೋಲು ಹಾಕಿಕೊಳ್ಳುವ ಷರತ್ತಿಗೂ ಎಲ್ಲಾ ಖಾಸಗಿ ಬಸ್‌ಗಳ ಮಾಲಕರು ಸಂಪೂರ್ಣ ಒಪ್ಪಿಗೆಯನ್ನು ಸೂಚಿಸಿದ್ದು, ಜಿಲ್ಲಾಡಳಿತದ ಷರತ್ತನ್ನು ಶೇ.100ರಷ್ಟು ಅನುಷ್ಠಾನಗೊಳಿಸುವ ಭರವಸೆಯನ್ನೂ ಅವರು ನೀಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

