ಬಂಟ್ವಾಳ : ತಾಲೂಕಿನ ಕುರಿಯಾಳ ಎಂಬಲ್ಲಿಗೆ ಸಮೀಪದ ಇರಾಕೋಡಿ ಎಂಬಲ್ಲಿಗೆ ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ತಂದಿದ್ದ ಯುವಕರಿಬ್ಬರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ತಲವಾರು ದಾಳಿ ನಡೆಸಿದ್ದು, ಈ ಪೈಕಿ ಚಾಲಕ ಮೃತಪಟ್ಟರೆ, ಇನ್ನೋರ್ವ ಗಂಭೀರ ಗಾಯಗೊಂಡಿದ್ದ ಕಲಂದರ್ ಶಾಫಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಳತ್ತಮಜಲು ನಿವಾಸಿಯಾದ ಅಬ್ದುಲ್ ರಹಿಮಾನ್ (34) ಹತ್ಯೆಗೀಡಾದ ಚಾಲಕ. ಈತನ ಜೊತೆಗಿದ್ದ ಕಲಂದರ್ ಶಾಫಿ ಎಂಬವರಿಗೆ ಕೈಯ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಕೊಳತ್ತಮಜಲು, ಬಡಗಬೆಳ್ಳೂರು ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಭಾಗದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಕಣ್ಣಾವಲು ಬಿಗಿಗೊಳಿಸಲಾಗಿದೆ.
ಕೊಲೆಗೀಡಾದ ರಹಿಮಾನ್ ಪಿಕಪ್ ಚಾಲಕನಾಗಿದ್ದು, ಮರಳುಬೇಕೆಂದು ಬಂದ ಕರೆಯೊಂದರ ಹಿನ್ನೆಲೆಯಲ್ಲಿ ತನ್ನ ಪಿಕಪ್‌ನಲ್ಲಿ ಮರಳು ತುಂಬಿಸಿ ನಿಗದಿತ ಸ್ಥಳವಾದ ಕುರಿಯಾಳ ಸಮೀಪದ ಇರಾಕೋಡಿಗೆ ತಲುಪಿ ವಾಹನದಿಂದ ಮರಳನ್ನು ಇಳಿಸುವ ಸಂದರ್ಭದಲ್ಲಿ, ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಿಂಭಾಗದಿಂದ ತಲೆಯ ಭಾಗಕ್ಕೆ ತಲವಾರಿನಿಂದ ದಾಳಿಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ರಹಿಮಾನ್ ಜೊತೆ ಶಾಫಿ ಎಂಬವರು ಜೊತೆಗಿದ್ದು, ಇವರ ಮೇಲೂ ದಾಳಿ ನಡೆದಿದೆ. ಪರಿಣಾಮ ಆತನ ಕೈಗೆ ತೀವ್ರತರವಾದ ಏಟಾಗಿದೆ. ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

