ಮಂಗಳೂರು : ಸತತವಾಗಿ ಸುರಿಯುತ್ತಿರುವ ಧಾರಾಕಾರ ಗಾಳಿ-ಮಳೆಗೆ ತುಂಡಾಗಿ ಗದ್ದೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಸಾವಿಗೀಡಾದ ಘಟನೆ ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಅಶ್ನಿ ಶೆಟ್ಟಿ (20) ಎಂಬಾಕೆ ದಾರುಣವಾಗಿ ಮೃತಪಟ್ಟ ವಿದ್ಯಾರ್ಥಿನಿ.
ಕಲ್ಲಕಲಂಬಿಯ ಹರೀಶ್ ಶೆಟ್ಟಿ ಮತ್ತು ಆಶಾ ಶೆಟ್ಟಿ ದಂಪತಿಯ ಪುತ್ರಿ ಅಶ್ನಿ ಶೆಟ್ಟಿ ಶುಕ್ರವಾರ ಬೆಳಿಗ್ಗೆ 7.00 ಗಂಟೆ ಸುಮಾರಿಗೆ ಮನೆಯ ನಾಯಿಯನ್ನು ಹುಡುಕಿಕೊಂಡು ಗದ್ದೆಯ ಕಡೆಗೆ ಹೋಗಿದ್ದು, ಈ ವೇಳೆ ಗದ್ದೆಯ ನೀರಿನಲ್ಲಿ ಮುಳುಗಿದ್ದ ನಾಯಿಯನ್ನು ಕಂಡು ಅದನ್ನು ಎತ್ತಲು ಪ್ರಯತ್ನಿಸಿದಳು. ಆಗ ಏಕಾಏಕಿಯಾಗಿ ವಿದ್ಯುತ್ ಪ್ರವಹಿಸಿ ಅಕೆ ನೀರಿಗೆ ಬಿದ್ದಳು. ಹತ್ತಿರದಲ್ಲಿದ್ದ ವಿದ್ಯುತ್ ಕಂಬದ ತಂತಿ ತುಂಡಾಗಿ ಗದ್ದೆಗೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡು ಮೂರು ನಾಯಿ ಹಾಗೂ ಕೇರೆ ಹಾವೊಂದು ಸತ್ತಿರುವುದರ ಅರಿವಿಲ್ಲದೆ ನಾಯಿಯನ್ನು ಮೇಲೆತ್ತಲು ಪ್ರಯತ್ನಿಸಿದಾಗ ಆಕೆಗೂ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ.