ಬೈಂದೂರು : ಶಾಸಕರ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ತರುತ್ತಿದ್ದಾರೆ ಎಂದು ಆರೋಪಿಸಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ದಿಢೀರ್ ಎಂದು ಧರಣಿಗೆ ಕೂತಿದ್ದಾರೆ ಅವರೊಂದಿಗೆ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಯಶ್ಪಾಲ್ ಸುವರ್ಣ ಹಾಗೂ ಗುರ್ಮೆ ಸುರೇಶ್ ಶೆಟ್ಟಿ ಧರಣಿಯಲ್ಲಿ ಭಾಗವಹಿಸಿದ್ದಾರೆ
ಶಾಸಕ ಗುರುರಾಜ್ ಗಂಟಿಹೊಳೆ ಅವರು ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾರ್ಯಕರ್ತ ಕಚೇರಿಯಲ್ಲಿ ಇಂದು ಅಧಿಕಾರಿಗಳ ಸಭೆ ನಿಗದಿಗೊಳಿಸಿದ್ದರು. ಆದರೆ ಈ ಸಭೆಗೆ ಅಧಿಕಾರಿಗಳು ಹೋಗದಂತೆ ಜಿಲ್ಲಾಧಿಕಾರಿಗಳು ಕರೆ ಮಾಡಿ ಸೂಚಿಸಿದ್ದರು, ಹೀಗಾಗಿ ಅಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ. ಇದರಿಂದ ಕೆರಳಿದ ಶಾಸಕರು ಜಿಲ್ಲಾಡಳಿತದ ವಿರುದ್ಧವೇ ಬೈಂದೂರು ತಾಲೂಕು ಆಡಳಿದ ಸೌಧದ ಮುಂಭಾಗದಲ್ಲಿ ಕಾರ್ಯಕರ್ತರೊಂದಿಗೆ ಧರಣಿ ನಡೆಸುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕರು, ಜನ ಕರೆದಲ್ಲಿಗೆ ನಾನು ಹೋಗಬೇಕು, ನಾನು ಕರೆದಲ್ಲಿಗೆ ಜನರ ಅಹವಾಲು ಸ್ವೀಕರಿಸಲು ಅಧಿಕಾರಿಗಳು ಬರಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇರುವುದು ಜನಸೇವೆಗೆ. ಸರ್ಕಾರ ನೀಡಿದ ಒಂದು ಕಚೇರಿಯಲ್ಲಿ ಕಾಲ ಮೇಲೆ ಕಾಲು ಹಾಕಿ ದರ್ಬಾರ್ ನಡೆಸುವ ವ್ಯಕ್ತಿ ನಾನಲ್ಲ. ತಾಲ್ಲೂಕಿನ ಜನತೆಯ ಉಪಯೋಗಕ್ಕಾಗಿ ಕ್ಷೇತ್ರದ ನಾಲ್ಕು ಭಾಗಗಳಲ್ಲಿ ಕಚೇರಿ ತೆರೆದಿದ್ದೇನೆ. ಈ ಕಚೇರಿಗಳಲ್ಲಿ ನಡೆಯುವ ಸಭೆಗಳಿಗೆ ಅಧಿಕಾರಿಗಳು ಹೋಗದಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡುತ್ತಿರುವುದು ಏಕೆ? ಜಿಲ್ಲಾಧಿಕಾರಿಗಳಿಗೆ ರಾಜಕೀಯ ಒತ್ತಡವಿದ್ದರೆ ನೇರ ಹೇಳಿ ಬಿಡಲಿ. ಶಾಸಕನ ಹಕ್ಕು ಮೊಟಕುಗೊಳಿಸುತ್ತಿರುವ ಆಡಳಿತಯಂತ್ರದ ವಿರುದ್ಧ ಅಹೋರಾತ್ರಿ ಧರಣಿಯ ಸಮರ ಸಾರಿದ್ದೇನೆ. ಸ್ಪಷ್ಟನೆ ಲಭ್ಯವಾಗುವವರೆಗೆ ವಿರಮಿಸುವ ಮಾತೇ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

