ಕುಂದಾಪುರ : ರೈಲ್ವೇ ವಿದ್ಯುದೀಕರಣದ ಕಾರಣ ನೀಡಿ ಕಾರವಾರ-ಬೆಂಗಳೂರು ಹಗಲು ರೈಲು ಮತ್ತು ಮಂಗಳೂರು-ಬೆಂಗಳೂರು ಹಗಲು ರೈಲುಗಳನ್ನು 5 ತಿಂಗಳ ಕಾಲ ರದ್ದು ಮಾಡಿದ ನೈರುತ್ಯ ರೈಲ್ವೆ ಕ್ರಮಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಬಳಿ ಚರ್ಚಿಸದೇ ಬದಲಿ ಮಾರ್ಗೋಪಾಯಗಳ ಕುರಿತು ಆಲೋಚಿಸಿದೇ ತೆಗೆದುಕೊಂಡ ಈ ತೀರ್ಮಾನದಿಂದ ವೃದ್ಧರು, ಗರ್ಭಿಣಿಯರು, ಮಹಿಳೆಯರು, ಪ್ರವಾಸಿಗರು, ನಿತ್ಯ ಪ್ರಯಾಣಿಕರು ಮಾತ್ರವಲ್ಲದೇ ಕರಾವಳಿಯ ಭಾರೀ ಮಳೆಯಿಂದಾಗಿ ರಸ್ತೆ ಸಮಸ್ಯೆಯ ಕಾರಣದಿಂದ ರೈಲು ಬಳಕೆ ಮಾಡುವ ಸಾರ್ವಜನಿಕರಿಗೂ ತೀವ್ರ ಸಮಸ್ಯೆಯಾಗಿದೆ ಎಂದು ಕೇಂದ್ರ ರೈಲ್ವೇ ಸಚಿವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ರೈಲ್ವೇ ಮಾರ್ಗದ ವಿದ್ಯುದೀಕರಣಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಈ ಕಾರಣಕ್ಕಾಗಿ ಹಗಲು ರೈಲುಗಳ ರದ್ದತಿ ಮಾಡದೇ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಇಲಾಖೆಯ ಜತೆ ಚರ್ಚೆ ನಡೆಸಿದ್ದಾರೆ.
ಈಗಾಗಲೇ ವಿದ್ಯದೀಕರಣದ ಕಾರ್ಯಗಳಿಗಾಗಿ ಎರಡು ಘಂಟೆಗಳ ಬ್ಲಾಕ್ ಇಲಾಖೆಯ ಬಳಿ ಹಾಸನ-ಸುಬ್ರಹ್ಮಣ್ಯ ನಡುವೆ ಇದ್ದು, ಸ್ವಲ್ಪವೇ ಪ್ರಯತ್ನ ಪಟ್ಟು ಗೂಡ್ಸ್ ಗಾಡಿಗಳ ಮರು ಹೊಂದಾಣಿಕೆ ಮಾಡಿದರೆ ಯಾವ ರೈಲುಗಳ ರದ್ದತಿಯನ್ನೂ ಮಾಡದೇ ವಿದ್ಯದೀಕರಣಕ್ಕಾಗಿ ಬೇಕಾಗಿದೆ ಎನ್ನಲಾದ 4 ಘಂಟೆಗಳನ್ನು ಹೊಂದಿಸಬಹುದಾಗಿದೆ, ಅದರೆ ಈ ಯಾವ ದಿಶೆಯಲ್ಲೂ ಆಲೋಚಿಸದೇ ನೇರಾ ನೇರ ರೈಲುಗಳನ್ನು 5 ತಿಂಗಳು ರದ್ದು ಮಾಡಿರುವ ಬಗ್ಗೆ ನೈರುತ್ಯ ರೈಲ್ವೆಗೆ ಪತ್ರ ಬರೆದಿರುವ ಸಂಸದರು, ತಕ್ಷಣವೇ ರದ್ದತಿಯನ್ನು ಹಿಂದೆಗೆಯುವ ಕುರಿತು ಕ್ರಮ ಕಗೊಳ್ಳುವಂತೆಯೂ, ಒಂದೊಮ್ಮೆ ರದ್ದತಿ ಅನಿವಾರ್ಯವಾದರೆ ಬದಲಿಯಾಗಿ ಕಾರವಾರ ಬೆಂಗಳೂರು ನಡುವೆ ರಾತ್ರಿ ರೈಲನ್ನು ಪಡೀಲ್ ಬೈಪಾಸ್ ಮೂಲಕ ನೀಡುವಂತೆಯೂ ಸೂಚಿಸಿದ್ದಾರೆ.

