ಕೋಟ : ಇಲ್ಲಿನ ಕೋಟ ಪಡುಕೆರೆ ಕಡಲ ತೀರದಲ್ಲಿ ಪ್ರವಾಸಿಗರಿಂದ ಉತ್ಪತ್ತಿಯಾದ ಕಸಗಳನ್ನು ಅಲ್ಲಲ್ಲೇ ಎಸೆದು ತೆರುಳುತ್ತಿರುವುದು ಸಾಮಾನ್ಯವಾಗಿದೆ ಇದನ್ನು ಮನಗಂಡು ಕಸವನ್ನು ವಿಲೇವಾರಿ ಮಾಡುವ ದೃಷ್ಟಿಯಿಂದ ಕೋಟದ ಮಣೂರು ಗೀತಾನಂದ ಫೌಂಡೇಶನ್ ವತಿಯಿಂದ ಹೊಸ ವಿನ್ಯಾಸದ ಆಕರ್ಷಕವಾದ ಭೂಗೋಳ ಆಕೃತಿಯ ಮಾದರಿಯನ್ನು ರಚಿಸಿ ಸಮುದ್ರ ದಡದಲ್ಲಿ ಸ್ಥಾಪಿಸಿ ಶುಕ್ರವಾರ ಕೋಟ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿತು. ಈ ಕಾರ್ಯಕ್ರಮದಲ್ಲಿ ಗೀತಾನಂದ ಪ್ರವರ್ತಕರಾದ ಆನಂದ್ ಸಿ ಕುಂದರ್ ಮಾತನಾಡಿ ಈ ಹೊಸ ಮಾದರಿಯ ಕಸ ಸಂಗ್ರಹಣಾ ಗೋಲಕ್ಕೆ ಪ್ರವಾಸಿಗರು ಕಸವನ್ನು ಸ್ವಯಂ ಸ್ಫೂರ್ತಿಯಿಂದ ಹಾಕಿ ಬೀಚಿನಲ್ಲಿ ಕಸದ ತ್ಯಾಜ್ಯ ಕಡಿಮೆ ಮಾಡಲು ಪ್ರೇರಣೆಯಾಗಲಿ ಇದರಿಂದ ನಾಗರಿಕರಲ್ಲಿ ಕಸ ವಿಲೇವಾರಿಯ ಸಂಸ್ಕ್ರತಿ ಬೆಳೆಯಲಿ ಎಂದು ಆಶಿಸಿದರು. ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಪ್ರಶಂಸಾ ಪತ್ರವನ್ನು ವಾಚಿಸಿ ಆನಂದ ಸಿ ಕುಂದರ್ ಅವರಿಗೆ ನೀಡಿದರು. ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಪಂಚಾಯತ್ ಕಾರ್ಯದರ್ಶಿ ಶೇಖರ್ ಮರವಂತೆ, ಪಂಚಾಯತ್ ಸದಸ್ಯರು, ಎಸ್ಎಲ್ಆರ್ಎಂ ಘಟಕದ ಮೇಲ್ವಿಚಾರಕಿ ಭವ್ಯ , ಜನತಾ ಸಂಸ್ಥೆಯ ಎಜಿಎಂ ಶ್ರೀನಿವಾಸ ಕುಂದರ್, ಫ್ಯಾಕ್ಟರಿ ಮ್ಯಾನೇಜರ್ ಮಿಥುನ್, ಗೀತಾನಂದ ಫೌಂಡೇಶನ್ನ ಪ್ರತಿನಿಧಿ ರವಿಕಿರಣ್, ದೀಕ್ಷಿತಾ ಹಾಗೂ ಸ್ವಯಂಸೇವಕರು ಮತ್ತು ಸ್ಥಳೀಯ ನಾಗರಿಕರು ಹಾಜರಿದ್ದರು.