ಬೈಂದೂರು : ತಾಲೂಕು ಪಂಚಾಯತ್ ಸಭಾಂಗಣ ದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೃಷಿ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಯವರು ಕೃಷಿ ಪತ್ತಿನ ಸಹಕಾರಿ ಸಂಘಗಳೂ ಸೇರಿದಂತೆ ಎಲ್ಲಾ ಸಹಕಾರಿ ಸಂಘಗಳು ಆಯಾ ಭಾಗದ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಹವಾಮಾನ ಆಧಾರಿತ ಬೆಳೆ ವಿಮೆ, ರಸ ಗೊಬ್ಬರ ಪೂರೈಕೆ ಕಾರ್ಯಕ್ರಮ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳ ಗರಿಷ್ಠ ಲಾಭವನ್ನು ದೊರಕಿಸಿ ಕೊಡಲು ಶ್ರಮ ವಹಿಸಬೇಕು ಎಂದರು
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಶೇಕಡಾ 100 ರಷ್ಟು ರೈತರನ್ನು ತಲುಪಲು ಯೋಜನೆ ಹಾಕಿಕೊಳ್ಳಿ :
ಪ್ರಸ್ತುತ ಹವಾಮಾನ ಆಧಾರಿತ ಬೆಳೆ ವಿಮೆಯಡಿ ಅಡಿಕೆ ಹಾಗೂ ಕಾಳು ಮೆಣಸು ಬೆಳೆಗಾರರು ನೋಂದಣಿ ಮಾಡಿಸಿಕೊಳ್ಳುತ್ತಿದ್ದರೂ ಬ್ಯಾಂಕಿನಿಂದ ಸಾಲ ಪಡೆದಿರುವ ರೈತರು ಸೇರಿದಂತೆ ಎಲ್ಲಾ ಬೆಳೆಗಾರರನ್ನು ತೋಟಗಾರಿಕೆ ಇಲಾಖೆಯ ಸಹಕಾರ ಪಡೆದು ನೋಂದಣಿ ಮಾಡಿಸುವ ಮೂಲಕ ಗರಿಷ್ಠ ವಿಮಾ ಸೌಲಭ್ಯ ಒದಗಿಸಲು ಹಾಗೂ ರೈತರ ಬೆಳೆಗಳಿಗೆ ಸಮರ್ಪಕವಾಗಿ ರಸ ಗೊಬ್ಬರ ಪೂರೈಕೆಯೂ ಸಕಾಲದಲ್ಲಿ ಆಗುವಂತೆ ಸಿಇಓ ಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕುಂದಾಪುರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ಕುಂದಾಪುರ, ತೋಟಗಾರಿಕೆ ಇಲಾಖೆ ಸಹಾಯಕ ತೋಟಗಾರಿಕೆ ಅಧಿಕಾರಿ ಹಾಗೂ ಕ್ಷೇತ್ರದ ವ್ಯವಸಾಯ ಸೇವಾ ಸಹಕಾರಿ ಸಂಘ ಗಳ ಸಿಇಓ ಗಳು ಉಪಸ್ಥಿತರಿದ್ದರು.

