Home » ಮಕ್ಕಳಿಗೆ ರಜೆ ಸಜೆಯಾಗದಿರಲಿ – ಮಹೇಶ್‌ ಹೈಕಾಡಿ
 

ಮಕ್ಕಳಿಗೆ ರಜೆ ಸಜೆಯಾಗದಿರಲಿ – ಮಹೇಶ್‌ ಹೈಕಾಡಿ

by Kundapur Xpress
Spread the love

ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಸಂತೋಷವನ್ನು ನೀಡುವ ಮತ್ತು ಅತ್ಯಂತ ಮುದವನ್ನು ನೀಡುವ ಸಂದರ್ಭಗಳು ಎರಡು. ಒಂದು ದಸರಾ ರಜೆ ಇನ್ನೊಂದು ಬೇಸಿಗೆ ರಜೆ .
ಬೇಸಿಗೆ ರಜೆ ಅತ್ಯಂತ ದೊಡ್ಡ ರಜೆಯಾಗಿದೆ  ವಿದ್ಯಾರ್ಥಿಗಳಿಗೆ ಮನಸೋ ಇಚ್ಛೆ ಆನಂದವನ್ನು ನೀಡುವ ರಜೆ ಇದಾಗಿದೆ. .
ಬೇಸಿಗೆ ರಜೆ ಪ್ರಾರಂಭವಾದಾಗ ಪೋಷಕರು ಮತ್ತು ಮಕ್ಕಳು ಒಂದು ವೇಳಾಪಟ್ಟಿಯನ್ನು ಸಿದ್ಧ ಮಾಡಿಕೊಳ್ಳಬೇಕು . ಅದರಂತೆ ರಜೆಯನ್ನು ಕಳೆದರೆ ಉತ್ತಮವಾಗುತ್ತದೆ.ಮಕ್ಕಳಿಗೆ ಆನಂದ ನೀಡುವಂತ ಅಂಶಗಳು ವೇಳಾಪಟ್ಟಿಯಲ್ಲಿ ಇರಲಿ.
ರಜೆ ಪ್ರಾರಂಭದಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ದಿನಾಂಕದವರೆಗೆ ಒಟ್ಟು ರಜೆಯನ್ನು ಲೆಕ್ಕ ಮಾಡಿ ಯಾವ ದಿನ ಎಲ್ಲೆಲ್ಲಿಗೆ ಹೋಗುವುದು? ಯಾವ ದಿನ ಏನು ಚಟುವಟಿಗಳನ್ನು ಮಾಡಬೇಕು ? ಎನ್ನುವುದರ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು.
ಬಂಧುಮನೆಗಳಿಗೆ ಭೇಟಿ ನೀಡುವುದು. ನರೆಹೊರೆ ಮಕ್ಕಳೆಲ್ಲರೂ ಸೇರಿ ಚಿನ್ನಿದಾಂಡು,ಕಣ್ಣಾ ಮುಚ್ಚಾಲೆ , ಮರಕೋತಿ ,ಲಗೋರಿ, ಕುಂಟೆಬಿಲ್ಲೆ ಮುಂತಾದ ಜನಪದ ಆಟಗಳನ್ನು ಆಡುವುದು.
ಮನೆಯಿಂದ 5 ಕಿ.ಮೀ ಒಳಗೆ ಯಾವುದೇ ಸ್ಥಳದಲ್ಲಿ ಯಕ್ಷಗಾನ , ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ , ಮದುವೆ , ಕೋಲ ಮುಂತಾದ ಸಮಾರಂಭಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವುದು. ಮನೆಯಲ್ಲಿ ತುಂಬಾ ಮಕ್ಕಳಿದ್ದಂತ ಸಂದರ್ಭದಲ್ಲಿ ಮನೆಯ ಹಿರಿಯರು ನಾಟಕ , ಕಿರು ಪ್ರಹಸನ, ರೂಪಕ ಮಾಡುವುದು.
ಎರಡು ಮಕ್ಕಳು ಅಥವಾ ಒಂದೇ ಮಗು ಇದ್ದಂತ ಸಂದರ್ಭದಲ್ಲಿ ಅಪ್ಪ ಅಮ್ಮ ಮಕ್ಕಳೊಂದಿಗೆ ಕುಳಿತು ಚಿತ್ರ ಬಿಡಿಸಲು ,ಬಣ್ಣ ತುಂಬಲು ಕಲಿಸುವುದು .ಕೈಗೆ ಮದರಂಗಿ ಇಡುವುದು,ಮುಖವಾಡ ರಚನೆಯ ಯೋಜನೆ ರೂಪಿಸುವುದು .
ಸಂಗೀತ,ಮೃದಂಗ,ಹಾರ್ಮೋನಿಯಂ , ಕರಾಟೆ , ಯಕ್ಷಗಾನ, ಈಜು ಮುಂತಾದ ಕೌಶಲಾಧಾರಿತ ಚಟುವಟಿಕೆಗಳಿಗೆ ಮಕ್ಕಳನ್ನು ತೊಡಗಿಸುವುದು.
ಸಂಜೆಯ ಸಮಯದಲ್ಲಿ ಮಕ್ಕಳನ್ನೆಲ್ಲರನ್ನೂ ಜೋಡಿಸಿ ಛದ್ಮವೇಷದ ಸ್ಪರ್ಧೆಯನ್ನು ಮಾಡಿ ಬಹುಮಾನವನ್ನು ನೀಡುವುದು .
ಬಿಸಿಲಿನ ತಾಪ ಹೆಚ್ಚು ಇರುವುದರಿಂದ ಎಳನೀರು , ರಾಗಿ ,ಹೆಸರು ಕಾಳುಗಳಿಂದ ಮನೆಯಲ್ಲಿ ತಂಪು ಪಾನೀಯಗಳನ್ನ ಮಾಡಿ ಕುಡಿಯುವುದು.ಮಾವಿನ ಹಣ್ಣು ಯಥೇಚ್ಛವಾಗಿ ಸಿಗುವ ಈ ಕಾಲದಲ್ಲಿ ಮನೆಯಲ್ಲಿ ಮಾವಿನಹಣ್ಣಿನ ಸಲಾಡ್ , ಜ್ಯೂಸ್ ಮಾಡಿ ಎಲ್ಲರೂ ಒಟ್ಟಾಗಿ ಸೇವಿಸುವುದು.
ರಾತ್ರಿ ಊಟದ ನಂತರ ದಂತಕಥೆ , ರಾಮಾಯಣ , ಮಹಾಭಾರತ , ನೀತಿ ಕಥೆ ಇವುಗಳನ್ನು ಮಕ್ಕಳಿಗೆ ಪೋಷಕರು ಹೇಳುವುದು. ಹಿರಿಯರು ಮಾಡುವ ಮನೆ ಕೆಲಸದಲ್ಲಿ ಮಕ್ಕಳು ಜೊತೆಯಾಗುವುದು. ಮನೆಯ ಸಮೀಪದ ಕಾಡುಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಮರ ಗಿಡ ಬಳ್ಳಿ ಪರಿಚಯವನ್ನು ಮಾಡಿಸುವುದು. ಸೈಕಲ್ ಕಲಿಯುವುದು, ಹೂ ಗಿಡಗಳಿಂದ ಹೂವನ್ನು ಕಿತ್ತುತಂದು ಮಾಲೆ ಮಾಡಿ ದೇವರ ಫೋಟೋಗಳಿಗೆ ಶೃಂಗರಿಸುವುದು.ಮನೆಯಲ್ಲಿ ಲ್ಯಾಪ್ ಟಾಪ್ ಇದ್ದರೆ ಕನ್ನಡ ನುಡಿ ಬರೆಹ ಕಲಿಯುವುದು .ರಜೆ ಮಕ್ಕಳ ಮಾನಸಿಕ ,ದೈಹಿಕ ವಿಕಾಸಕ್ಕೆ ಪೂರಕವಾಗಲಿ.ಮಕ್ಕಳು ಮತ್ತು ಪೋಷಕರಲ್ಲಿ ಉತ್ತಮ ಬಾಂಧವ್ಯ ಉಂಟಾಗಲಿ.ವೇಳಾಪಟ್ಟಿಯಂತೆ ರಜೆಯನ್ನು ಸಮರ್ಪಕವಾಗಿ ನಿರ್ವಹಿಸೋಣ.ರಜೆ ಸಜೆಯಾಗದೆ ಮಜವಾಗಿರಲಿ.

 

Related Articles

error: Content is protected !!