ಬೆಳಗಾವಿ : ಲೋಕಸಭಾ ಚುನಾವಣೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಂಗಳವಾರ ಬೆಳಗಾವಿಯಿಂದಲೇ ಲೋಕಾ ಸಮರಕ್ಕೆ ಕಹಳೆ ಮೊಳಗಿಸಿದ್ದಾರೆ.
ಮಂಗಳವಾರ ಬೆಳಗ್ಗೆ ವಿಶೇಷ ವಿಮಾನದ ಮೂಲಕ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೆ.ಪಿ.ನಡ್ಡಾ ಅವರು, ಸ್ಥಳೀಯ ಮುಖಂಡರೊಂದಿಗೆ ಕೆಲ ಕಾಲ ಕಳೆದು ಹೆಲಿಕ್ಯಾಪ್ಟರ್ ಮೂಲಕ ಚಿಕ್ಕೋಡಿ ತೆರಳಿ ಅಲ್ಲಿ ಆಯೋಜಿಸಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾದರು
ನಂತರ, ಮಧ್ಯಾಹ್ನ ಬೆಳಗಾವಿಗೆ ಆಗಮಿಸಿ ನಗರದ ಹೊರ ವಲಯದಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ನಡೆದ ಬೆಳಗಾವಿ ವಲಯ ಕೋರ್ ಕಮಿಟಿ ಸಭೆಯಲ್ಲಿ ನಾಲ್ಕು ಲೋಕಸಭಾ ಮತ ಕ್ಷೇತ್ರಗಳ ಮುಖಂಡರು ಸೇರಿದಂತೆ ರಾಜ್ಯ ಮತ್ತು ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸಿದರು.
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿತ್ತು. ಸಭೆಯಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಮುಖಂಡರು, ಆಕಾಂಕ್ಷಿಗಳು ಪದಾಧಿಕಾರಿಗಳು ಹಲವು ಜಿಲ್ಲೆಗಳ ಮುಖಂಡರು ಪಾಲ್ಗೊಂಡಿದ್ದರು ನಡ್ಡಾ ಅವರು ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರಲ್ಲದೇ ಸಲಹೆ ಸೂಚನೆ ಪಡೆದುಕೊಂಡರು
ಈ ಸಂದರ್ಭದಲ್ಲಿ ಮಾತನಾಡಿದ ನಡ್ಡಾ ಅವರು, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮತದಾರರನ್ನು ಹೆಚ್ಚಿನ ಮತದಾನ ಮಾಡುವಂತೆ ಪ್ರೇರೇಪಿಸಬೇಕು. ಅದೇ ರೀತಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೂ ಒತ್ತು ಕೊಡುವಂತೆ ಜೆ.ಪಿ.ನಡ್ಡಾ ಸೂಚಿಸಿದ್ದಾರೆ. ಆದರೆ, ಅಭ್ಯರ್ಥಿ ಆಯ್ಕೆ ಟಿಕೆಟ್ ವಿಚಾರದ ಕುರಿತು ಈ ಸಭೆಯಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದು ಮೂಲಗಳು ತಿಳಿಸಿವೆ

