ಶಿವಮೊಗ್ಗ:ಬ್ರಹ್ಮ ಬಂದು ಹೇಳಿದರೂ ನನ್ನ ನಿಲುವಿನಿಂದ ಹಿಂದೆ ಸರಿಯಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೂ ಈ ವಿಚಾರಲ್ಲಿ ಗೊಂದಲಕ್ಕೆ ಈಡಾಗಬಾರದು ಎಂದು ಪುನರುಚ್ಚರಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಸೇರಿದಂತೆ ಯಾರೂ ನನ್ನ ಜೊತೆ ಮಾತನಾಡಿಲ್ಲ. ಮಾತನಾಡಿದರೂ ನನ್ನ ನಿಲುವು ಬದಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಾನು ರಾಷ್ಟ್ರಭಕ್ತ ಬಳಗ ಎಂಬ ಸಂಘಟನೆ ಮೂಲಕ ಸ್ಪರ್ಧಿಸುತ್ತಿದ್ದು, ಚುನಾವಣೆಯಲ್ಲಿ ಖಂಡಿತಾ ಗೆಲ್ಲುತ್ತೇನೆ ಎಂದರು. ಮಾ. 26ರಂದು ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಭಾಗದ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಸುಮಾರು 4 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಮಾ.28 ರಂದು ತಮ್ಮ ಚುನಾವಣಾ ಕಚೇರಿ ಮನೆಯ ಆವರಣದಲ್ಲಿ ಉದ್ಘಾಟನೆಗೊಳ್ಳಲಿದ್ದು, ವಿಶೇಷ ವ್ಯಕ್ತಿಯೊಬ್ಬರು ಹಾಗೂ ಐದು ಮಂದಿ ಮುತ್ತೈದೆಯರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗ ಳಲ್ಲಿಯೂ ಮಹತ್ತರ ಬದಲಾವಣೆಯಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ. ವಿಜಯೇಂದ್ರ ರಾಜೀನಾಮೆ ನೀಡಿದರೆ, ಇನ್ನೊಂದಡೆ ಕಡಿಮೆ ಸ್ಥಾನ ಗಳಿಸಿದ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜೀನಾಮೆ ಕೊಡಬೇಕಾಗಬಹುದು ಎಂದರು. ಶಿವಮೊಗ್ಗದಲ್ಲಿ ಕಾಂಗ್ರೆಸ್‌ನಿಂದ ಗೀತಾಗೆ ಟಿಕೆಟ್ ಸಿಗಲು ಯಡಿಯೂರಪ್ಪ-ಸಿದ್ದರಾಮಯ್ಯ ನವರ ಹೊಂದಾಣಿಕೆ ರಾಜಕಾರಣ ಕಾರಣ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಡಮ್ಮಿ ಕ್ಯಾಂಡಿಡೇಟ್ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದರು.