ಮಂಗಳೂರು : ಕುಟುಂಬ ರಾಜಕಾರಣದಿಂದ ಬಿಜೆಪಿಯನ್ನು ಶುದ್ದೀಕರಣಗೊಳಿಸಲು ಈ ಬಾರಿಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ರಘುಪತಿ ಭಟ್ ಅವರನ್ನು ಬೆಂಬಲಿಸುವಂತೆ ಮಾಜಿ ಸಚಿವ ಈಶ್ವರಪ್ಪ ಅವರು ಪದವೀಧರ ಮತದಾರರನ್ನು ವಿನಂತಿಸಿದ್ದಾರೆ. ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಈಗ ಅಪ್ಪ, ಮಕ್ಕಳ ಪಕ್ಷವಾಗಿದೆ. ಪಕ್ಷದ ತತ್ವ, ಸಿದ್ಧಾಂತಕ್ಕಿಂತಲೂ ಕುಟುಂಬ ರಾಜಕಾರಣವೇ ಮೇಳೈಸುತ್ತಿದೆ. ಇದನ್ನು ನೋಡಿ ಬಿಜೆಪಿ ನಿಷ್ಠ ಕಾರ್ಯಕರ್ತರಿಗೆ ನೋವಾಗಿದೆ. ಕೇಂದ್ರ ನಾಯಕರೂ ಕೂಡ ಬಿಎಸ್ವೈ ಬಿಟ್ಟರೆ ಬೇರೆ ಯಾರೂ ಕರ್ನಾಟಕದಲ್ಲಿ ಇಲ್ಲ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಇದನ್ನು ಸರಿಪಡಿಸಬೇಕಾದರೆ, ಬಿಜೆಪಿಗಾಗಿ ಜೀವನ ಸವೆಸಿದ ರಘುಪತಿ ಭಟ್ ಅಂತಹವರನ್ನು ಪರಿಷತ್ ಚುನಾವಣೆಯಲ್ಲಿ ಆರಿಸಬೇಕು. ಆಗ ಮಾತ್ರ ರಾಜ್ಯ ಬಿಜೆಪಿಯನ್ನು ಪೂರ್ತಿಯಾಗಿ ಶುದ್ದೀಕರಣ ಮಾಡಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.