ಕಾರ್ಕಳ : ಕಾರ್ಕಳ ತಾಲೂಕಿನ ಬೈಲೂರು-ಉಮಿಕ್ಕಳ ಬೆಟ್ಡದ ಮೇಲಿನ ಪರಶುರಾಮ ಥೀಮ್ ಪಾರ್ಕ್ ಯೋಜನೆಯ ಬಗ್ಗೆ ಅಪಪ್ರಚಾರ, ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಹಾಗೂ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಅಗತ್ಯ ಕ್ರಮಕೈಗೊಳ್ಳುವಂತೆ ಬಿಜೆಪಿ ಕಾರ್ಕಳ ಮಂಡಲದಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸದರಿ ಯೋಜನೆ ಸಂಬಂಧ ಒಂದು ವರ್ಷದ ಬಳಿಕ ಯೋಜನೆಯ ಅನುಷ್ಠಾನ ಅಧಿಕಾರಿ ಎಂದು ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರನ್ನು ಅಮಾನತುಗೊಳಿಸಿರುವ ಜಿಲ್ಲಾಡಳಿತ ಕ್ರಮ ಸ್ವಾಗತಾರ್ಹವಾಗಿದೆ. ಮೊದಲ ದಿನದಿಂದಲೂ ಜಿಲ್ಲಾಡಳಿತ ಇಂತಹ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುತ್ತಿದ್ದರೆ ಪ್ರವಾಸಿ ಯೋಜನೆಯೊಂದು ಇಷ್ಟೊಂದು ಅಪಪ್ರಚಾರಗಳಿಗೆ ಒಳಗಾಗುತ್ತಿರಲಿಲ್ಲ. ತನಿಖೆ ನಡೆದು ಕಾಮಗಾರಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿತ್ತು, ತಡವಾಗಿ ಜಿಲ್ಲಾಡಳಿತ ಎಚ್ಚರಗೊಂಡಿದೆ.
ಜಿಲ್ಲಾಧಿಕಾರಿಗಳ ಈ ಕ್ರಮ ಇಷ್ಟಕ್ಕೇ ಸೀಮಿತವಾಗಿರದೆ ಯೋಜನೆ ಕುರಿತು ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಲ್ಲಿ, ಸಭೆಗಳಲ್ಲಿ, ಮೀಡಿಯಾಗಳಲ್ಲಿ ಭ್ರಷ್ಟಾಚಾರ ನಡೆದಿದೆ, ನಕಲಿ ಮೂರ್ತಿ ಎಂದು ಸಾಕಷ್ಟು ಅಪಪ್ರಚಾರ ನಡೆಸಿದವರ ವಿರುದ್ಧವೂ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಥೀಮ್
ಪಾರ್ಕ್‌ಗೆ ಸಾರ್ವಜನಿಕ ಪ್ರವೇಶ ನಿಷೇಧ ಇದ್ದರೂ, ನಿಷೇಧವನ್ನು ಉಲ್ಲಂಘಿಸಿ ಒಳ ಪ್ರವೇಶ ಮಾಡಿ ಸಾರ್ವಜನಿಕ ಸ್ವತ್ತನ್ನು ಹಾನಿ ಮಾಡಿ, ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧವೂ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಕಳದ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಬೋಳ ಜಯರಾಮ್ ಸಾಲ್ಯಾನ್, ಜಿಲ್ಲಾ ಕಾರ್ಯದರ್ಶಿ ಉದಯ್ ಎಸ್. ಕೋಟ್ಯಾನ್, ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ, ಕಾರ್ಕಳ ನಗರಾಧ್ಯಕ್ಷ ನಿರಂಜನ್ ಜೈನ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕಾಬೆಟ್ಟು, ವಿಘ್ನೇಶ್ ರಾವ್ ಬಂಗ್ಲೆಗುಡ್ಡೆ, ಬಿಜೆಪಿ ಪ್ರಮುಖರಾದ ರವೀಂದ್ರ ಕುಮಾರ್, ಸೂರ್ಯಕಾಂತ್ ಶೆಟ್ಟಿ ಕೆದಿಂಜೆ, ದೇವೇಂದ್ರ ಶೆಟ್ಟಿ ಬೆಳ್ಮಣ್, ಶಂಕರ್ ಕುಂದರ್ ಸೂಡ, ಯುವ ಮೋರ್ಚಾದ ರಜತ್ ರಾಮ್ ಮೋಹನ್, ರೈತ ಮೋರ್ಚಾದ ಮೋಹನ್ ಶೆಟ್ಟಿ ಬೋಳ, ಸುನಿಲ್ ಪೂಜಾರಿ ಚಾರಾ, ಹೆಬ್ರಿ ತಾಲೂಕು ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ ಪ್ರಭಾಕರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.