ಬೈಂದೂರು : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾ ನವರಾತ್ರಿ ಮಹೋತ್ಸವಕ್ಕೆ ಗುರುವಾರ ದೇವಳದ ತಂತ್ರಿ ನಿತ್ಯಾನಂದ ಅಡಿಗ ಅವರ ನೇತೃತ್ವದಲ್ಲಿ ಅರ್ಚಕ ಕೆ. ಎನ್. ಸುಬ್ರಹ್ಮಣ್ಯ ಅಡಿಗ ಬೆಳಗ್ಗೆ ಗಣಪತಿ ಪೂಜೆಯೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು ಬಳಿಕ ಶ್ರೀದೇವಿಗೆ ವಿಶೇಷ ಪೂಜೆ, ಮಂಗಳಾರತಿ ನಡೆಯಿತು.
ದೇವಳದ ಸ್ವರ್ಣಮುಖ ವೇದಿಕೆಯಲ್ಲಿ ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಉತ್ಸವಕ್ಕೆ ದೇವಳದ ಆಡಳಿತಾಧಿಕಾರಿ ಮಹೇಶಚಂದ್ರ ಚಾಲನೆ ನೀಡಿದರು. ಹತ್ತು ದಿನಗಳ ಕಾಲ ನಡೆಯುವ ಉತ್ಸವಕ್ಕೆ ದೇವಳ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಊರ- ಪರವೂರಿನಿಂದ ಭಕ್ತರಿಗೋಸ್ಕರ ವಿಶೇಷ ಸೌಕರ್ಯ ಒದಗಿಸಲಾಗಿದೆ. ಚಂಡಿಕಾಯಾಗ, ರಥೋತ್ಸವ, ವಿದ್ಯಾರಂಭ, ನವಾನ್ನಪ್ರಾಶನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನವರಾತ್ರಿ ಸಂದರ್ಭ ನಡೆಯುತ್ತವೆ. ಪ್ರತಿದಿನ ಸಾಂಸ್ಕೃತಿಕ ಉತ್ಸವವೂ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು. ಅಕ್ಟೋಬರ್ 12ರ ತನಕ ಜರುಗುವ ಉತ್ಸವಕ್ಕೆ ಹಾಗೂ ಶ್ರೀ ಮೂಕಾಂಬಿಕೆಯ ದರ್ಶನ ಪಡೆಯಲು ಮತ್ತು ಸೇವೆಗಾಗಿ ರಾಜ್ಯ, ಹೊರರಾಜ್ಯ, ದೇಶ-ವಿದೇಶದಿಂದ ಅಗಮಿಸುವ ಲಕ್ಷಾಂತರ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ದೇವಳದ ವತಿಯಿಂದ ಸಕಲ ರೀತಿಯಲ್ಲಿ ಮೂಲಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ