ಕೋಟ : ಅಲ್ಲಿ ಹಬ್ಬದ ಸಂಭ್ರಮ, ವಿದ್ಯಾರ್ಥಿನಿಯರೆಲ್ಲ ತಮ್ಮ ಗೆಲುವಿನ ಖುಷಿಯನ್ನು ಹಂಚಿಕೊಳ್ಳುತ್ತಿದ್ದರು. ಶಿಕ್ಷಕರ ಕಾಲಿಗೆ ಬಿದ್ದು ಆರ್ಶೀರ್ವಾದ ಪಡೆದುಕೊಳ್ಳುತ್ತಿದ್ದರು. ಶಾಲೆಯ ಕುರಿತಾದ ಅನಿಸಿಕೆಗಳ ವಿನಿಮಯ ಮಾಡಿಕೊಂಡರು. ಹಾಡು ನೃತ್ಯ ಕೊನೆಗೆ ಸಮೂಹ ಭೋಜನ ಹೌದು, ಇದೊಂದು ವಿಶಿಷ್ಠ ಕಾರ್ಯಕ್ರಮ. ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಒಂದು ಅಪೂರ್ವ ಅಭಿನಂದನಾ ಸಮಾರಂಭ
ರಾಜ್ಯ ಪ್ರಶಸ್ತಿ ಪುರಸ್ಕ್ರತ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟರವರು ವಿದಾಯ ಸಮಾರಂಭದಲ್ಲಿ ಹಾಗೇ ಸುಮ್ಮನೆ ಸವಾಲೊಂದನ್ನು ಎಸೆದಿದ್ದರು. “ಈ ಬಾರಿ ಶಾಲೆಗೆ ನೂರಕ್ಕೆ ನೂರು ಶೇಕಡಾ ಫಲಿತಾಂಶ ತಂದು ಕೊಟ್ಟಲ್ಲಿ ಊಟವನ್ನು ಹಾಕುವೆ” ಅದಕ್ಕೆ ಮುಖ್ಯೋಪಾಧ್ಯಾಯ ಜಗದೀಶ್ ಹೊಳ್ಳರು ಧ್ವನಿ ಸೇರಿಸಿದರು. ಪ್ರತಿಕ್ರಿಯಿಸಿದ ವಿದ್ಯಾರ್ಥಿ ನಾಯಕಿ ಅನ್ವಿತಾ ತರಗತಿ ನಾಯಕಿಯರಾದ ವಾರುಣಿ ಮತ್ತು ಸಂಗೀತಾ ಖಂಡಿತಾ ಎಂದು ವಾಗ್ದಾನ ನೀಡಿದ್ದರು.
ವಿದ್ಯಾರ್ಥಿನಿಯರ ಛಲ, ಪೋಷಕರ ಒತ್ತಾಸೆ, ಶಿಕ್ಷಕರ ಪರಿಶ್ರಮ ನಿರೀಕ್ಷೆಯಂತೆ `ನೂರು ಶೇಖಡಾ ಫಲಿತಾಂಶ’ ಬಂದೇ ಬಿಟ್ಟಿತು. ವಿದ್ಯಾರ್ಥಿನಿಯರಿಗೆ ಮುಗಿಲು ಮುಟ್ಟುವ ಹರುಷ, ಶಿಕ್ಷಕ ವೃಂದಕ್ಕೆ ಕೊನೆಯಿರದ ಸಂತಸ.
ವಲಯದ ಏಕೈಕ ಬಾಲಕಿಯರ ಪ್ರೌಢಶಾಲೆ ಎಂದರೆ ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆ. ಜಿಲ್ಲೆಯ ಮೂಲೆ ಮೂಲೆಯಿಂದ ಹರಿದು ಬಂದ ವಿದ್ಯಾರ್ಥಿಗಳ ಮೆರವಣೆಗೆ ಹೊಸ ಭಾಷ್ಯ ಬರೆದಿದೆ. ಸಾಮಾನ್ಯ ವಿದ್ಯಾರ್ಥಿನಿಯರನ್ನು ಅಸಮಾನ್ಯರನ್ನಾಗಿ ಬೆಳೆಸುವ ವಾತಾವರಣ. ಶಿಕ್ಷಕರ ಕೃತುಶಕ್ತಿ, ಆಧುನಿಕತೆಯ ನಾವೀನ್ಯ ತಂತ್ರಜ್ಞಾನದ ಬಳಕೆ ಆಡಳಿತ ಮಂಡಳಿಯಾದ ಕೋಟ ವಿದ್ಯಾಸಂಘದ ಪರಿಪೂರ್ಣ ಸಹಕಾರ, ಉತ್ತೇಜನ, ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ ಇವೆಲ್ಲಾ ಈ ಶಾಲೆಯನ್ನು ಎತ್ತರಕ್ಕೇರಿಸಿದೆ.
ಸದಾ ನೂರರ ಸನಿಹದಲ್ಲಿ ಫಲಿತಾಂಶ ಬರುವ ಶಾಲೆಗೆ, ಈ ಬಾರಿ ನೂರು ಫಲಿತಾಂಶ. 55 ವರುಷಗಳ ಇತಿಹಾಸದಲ್ಲಿ ಮೊದಲಾದರೂ ಗುಣಮಟ್ಟದೊಂದಿಗೆ ಅನವರತ ರಾಜಿ ಮಾಡಿಕೊಂಡ ಸಂಸ್ಥೆ.
ಅದೇನೆ ಇದ್ದರೂ ಈ ಅಭಿನಂದನಾ ಸಮಾರಂಭ ವಿಶಿಷ್ಠತೆಯಿಂದ ಗಮನ ಸೆಳೆಯಿತು. ಪ್ರತಿ ವಿದ್ಯಾರ್ಥಿಗೂ ಕನ್ನಡದ ಸಾಲು, ಹೊತ್ತಗೆ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿನಿಯರ ಕಣ್ಣಾಲಿ ತುಂಬಿ ಬಂತು. ಬಳಿಕ ವಿದ್ಯಾರ್ಥಿನಿಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ಶುಚಿ-ರುಚಿಯಾದ ಭೋಜನದೊಂದಿಗೆ ಪರಿಸಮಾಪ್ತ ಗೊಂಡಿತು.
ಶಿಕ್ಷಕ ಬಂಧುಗಳಾದ ರಾಧಾಕೃಷ್ಣ ಭಟ್, ಗಣೇಶ್ ಶೆಟ್ಟಿಗಾರ್, ನಾರಾಯಣ ಮೂರ್ತಿ, ಪುಷ್ಪಲತಾ, ಸುಮಂಗಲ, ಮಮತ, ವಿಜಯಲಕ್ಷ್ಮೀ, ಮಹಾಲಕ್ಷ್ಮೀ ಸೋಮಯಾಜಿ, ನಾಗರತ್ನ, ಕುಸುಮಾ ಸಹಕರಿಸಿದರೆ ಶಿಕ್ಷಕೇತರ ಒಡನಾಡಿಗಳಾದ ಶೈಲಜಾ, ಸುಧಾಕರ, ಮಮತಾ ಕೈ ಜೋಡಿಸಿದರು. ಮುಖ್ಯೋಪಾಧ್ಯಾಯರಾದ ಜಗದೀಶ್ ಹೊಳ್ಳ ಹಿರಿಯ ಶಿಕ್ಷಕರಾದ ನರೇಂದ್ರ ಕುಮಾರ್ ಕಾರ್ಯಕ್ರಮವನ್ನು ಸಂಘಟಿಸಿದರು.