Home » ಪಕ್ಷದ ಶಾಸಕರ ಅವಹೇಳನ ಸಹಿಸಲಾಗದು – ಜನ ಸಾಮಾನ್ಯರ ಸಮಸ್ಯೆಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸ್ಪಂದಿಸಲಿ
 

ಪಕ್ಷದ ಶಾಸಕರ ಅವಹೇಳನ ಸಹಿಸಲಾಗದು – ಜನ ಸಾಮಾನ್ಯರ ಸಮಸ್ಯೆಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸ್ಪಂದಿಸಲಿ

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ

by Kundapur Xpress
Spread the love

‘ವ್ಯಕ್ತಿಗಿಂತ ಪಕ್ಷ ಮೇಲು, ಪಕ್ಷಕ್ಕಿಂತ ದೇಶ ಮೇಲು’ ಎಂಬ ಉದಾತ್ತ ಚಿಂತನೆಯುಳ್ಳ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತ ಆಧಾರಿತ ರಾಜಕೀಯ ಪಕ್ಷ. ಓರ್ವ ಸಾಮಾನ್ಯ ಕಾರ್ಯಕರ್ತನೂ ಪಕ್ಷ ನಿಷ್ಠೆ ಹಾಗೂ ಬದ್ಧತೆಯಿಂದ ಹಂತ ಹಂತವಾಗಿ ಎತ್ತರಕ್ಕೇರುವ ಅವಕಾಶಗಳು ಪಕ್ಷದ ಚೌಕಟ್ಟಿನಲ್ಲಿದೆ. ಈ ನಿಟ್ಟಿನಲ್ಲಿ ಕೆಲವು ಪ್ರಚಲಿತ ವಿದ್ಯಮಾನಗಳಲ್ಲಿ ನಡೆಯುತ್ತಿರುವ ನಮ್ಮ ಪಕ್ಷದ ಶಾಸಕರ ಅವಹೇಳನವನ್ನು ಸಹಿಸಲಾಗದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಶಾಸಕರುಗಳ ಬಗ್ಗೆ ಪಕ್ಷ ಹಾಗೂ ಕಾರ್ಯಕರ್ತರಿಗೆ ಅಪಾರ ಗೌರವವಿದೆ. ಯಾವುದೋ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಪಕ್ಷದ ಶಾಸಕರನ್ನು ನಿಕೃಷ್ಟ ಪದಗಳಿಂದ ಅವಮಾನಿಸುವ ಮಾಜಿ ಶಾಸಕರ ವರ್ತನೆ ಖಂಡನೀಯ. ಇಂತಹ ನಡೆಗಳಿಂದ ಪಕ್ಷ ಮತ್ತು ಪಕ್ಷದ ಕಾರ್ಯಕರ್ತರನ್ನು ಎಂದೂ ವಿಚಲಿತಗೊಳಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಪಕ್ಷದ ತತ್ವ ಸಿದ್ಧಾಂತ ಮತ್ತು ರಾಷ್ಟ್ರೀಯ ವಿಚಾರಗಳನ್ನು ಮೈಗೂಡಿಸಿಕೊಂಡು ಪಕ್ಷದ ಹಿರಿಯರಿಂದ ಪಡೆದ ಮಾರ್ಗದರ್ಶನದಿಂದ ನಾಯಕರಾಗಿ ಬೆಳೆದವರು ಇತರ ಕಾರ್ಯಕರ್ತರನ್ನೂ ಬೆಳೆಸುವುದು ಪಕ್ಷದ ಸಂಪ್ರದಾಯ. ಈ ಭವ್ಯ ಪರಂಪರೆಯೊಂದಿಗೆ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಐದು ಶಾಸಕರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸಹಿತ ಎಲ್ಲಾ ಸ್ತರಗಳಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದು ಸಮೃದ್ಧವಾಗಿ ಬೆಳೆದಿದೆ. ಪಕ್ಷದ ಕಾರ್ಯಕರ್ತರಲ್ಲಿ ಅಥವಾ ಮತದಾರರಲ್ಲಿ ಯಾವುದೇ ವಿಚಾರದಲ್ಲಿ ಗೊಂದಲವಿಲ್ಲ. ಕೇವಲ ವ್ಯಕ್ತಿ ವ್ಯಾಮೋಹ ಇರುವವರಿಗೆ ಮಾತ್ರ ತುಸು ಗೊಂದಲವೆನಿಸಬಹುದು. ರಾಷ್ಟ್ರೀಯತೆ ಮತ್ತು ಪಕ್ಷ ನಿಷ್ಠೆಯನ್ನು ನೆಚ್ಚಿಕೊಂಡಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಇಂತಹ ಕ್ಷುಲ್ಲಕ ವಿಚಾರಗಳಲ್ಲಿ ಎಂದೂ ಧೃತಿಗೆಡುವುದಿಲ್ಲ.

ಈ ನಿಟ್ಟಿನಲ್ಲಿ ಪಕ್ಷದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಅಧಿಕಾರವನ್ನು ಅನುಭವಿಸಿ, ಪ್ರಸಕ್ತ ಪಕ್ಷ ವಿರೋಧಿ ಚಟುವಟಿಕೆಗಳಿಂದ ಪಕ್ಷದಿಂದ ಉಚ್ಚಾಟನೆಗೊಂಡಿರುವ ಮಾಜಿ ಶಾಸಕರು ಪಕ್ಷದ ಶಾಸಕರ ವೈಯಕ್ತಿಕ ನಿಂದನೆ ಹಾಗೂ ಗತ ವಿಚಾರಗಳ ಉತ್ಪ್ರೇಕ್ಷೆಯ ವ್ಯರ್ಥ ಯತ್ನವನ್ನು ಕೈಬಿಟ್ಟು ಪ್ರಬುದ್ಧ ನಡೆಯನ್ನು ಅನುಸರಿಸುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ ಗೊಂದಲದ ಗೂಡಾಗಿರುವ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಏಕ ವಿನ್ಯಾಸದ ಅನುಮೋದನೆಗೆ ಧರಣಿ ನಡೆಸಿದ ಮಾಜಿ ಶಾಸಕರಿಗೆ ತುರ್ತಾಗಿ ಸ್ಪಂದಿಸಿದ ರೀತಿಯಲ್ಲೇ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸಾವಿರಾರು ಕಡತಗಳ ವಿಲೇವಾರಿಗೆ ತುರ್ತು ಕ್ರಮ ವಹಿಸಿ ಜನ ಸಾಮಾನ್ಯರ ಸಂಕಷ್ಟವನ್ನೂ ಪರಿಹರಿಸಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯ ಮೂಲಕ ಅಗ್ರಹಿಸಿದ್ದಾರೆ.

 

Related Articles

error: Content is protected !!