Home » ಬ್ಯಾಂಕ್‌ಗೆ ಸಾಲ ಬಾಕಿ ಪೊಲೀಸ್ ಭದ್ರತೆಯಲ್ಲಿ ಜಾಗ, ಮನೆ ಹರಾಜು
 

ಬ್ಯಾಂಕ್‌ಗೆ ಸಾಲ ಬಾಕಿ ಪೊಲೀಸ್ ಭದ್ರತೆಯಲ್ಲಿ ಜಾಗ, ಮನೆ ಹರಾಜು

by Kundapur Xpress
Spread the love

ಕೋಟ : ಬ್ಯಾಂಕ್‌ಗೆ ಸಾಲ ಬಾಕಿ ಇರಿಸಿಕೊಂಡ ಹಿನ್ನಲೆಯಲ್ಲಿ ಕೋರ್ಟ್ನ ಅಮೀನ್ ಅವರ ಸಮ್ಮುಖದಲ್ಲಿ ಮನೆ, ಜಾಗದ ಹರಾಜು ನಡೆಸಿದ ಘಟನೆ ಕೋಟದಲ್ಲಿ ನಡೆದಿದೆ.

ಇಲ್ಲಿನ ಕೋಟತಟ್ಟು ಗೊಬ್ಬರಬೆಟ್ಟು ಪ್ರದೇಶದ ಸ.ನಂ. 106/4 ಜಾಗದ ಮೇಲೆ ಸ್ಥಳೀಯ ನಿವಾಸಿಯೋರ್ವರು 15 ವರ್ಷದ ಹಿಂದೆ 20 ಲಕ್ಷ ರೂವನ್ನು ಸ್ಥಳೀಯ ಕೋಟ ಸಿ.ಎ.ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದು ಹದಿನೈದು ವರ್ಷಗಳಿಂದ ಮರುಪಾವತಿ ಮಾಡಿರಲಿಲ್ಲ. ಪ್ರಸ್ತುತ ಸಾಲದ ಅಸಲು, ಬಡ್ಡಿ ಸೇರಿ  63 ಲಕ್ಷ ತನಕ ತಲುಪಿದ್ದು ಸೊಸೈಟಿಯವರ ಮನವಿ ಮೇರೆಗೆ ಉಡುಪಿಯ ನ್ಯಾಯಾಲಯ ಜಾಗ ಹಾಗೂ ಮನೆ ಹರಾಜಿಗೆ ಆದೇಶ ನೀಡಿತ್ತು. ಈ ಪ್ರಕ್ರಿಯೆಗಳು ಜು.14ರಂದು ಕೋರ್ಟ್ ಅಮೀನ್ ನೇತೃತ್ವದಲ್ಲಿ ನಡೆಯಿತು. ಸುಮಾರು 1 ಕೋಟಿ 33 ಲಕ್ಷರೂ ತನಕ ಎಲಂನಲ್ಲಿ ಬಿಡ್ ಕೂಗಲಾಗಿದ್ದು ನ್ಯಾಯಾಲಯದಲ್ಲಿ ಅಂತಿಮ ಪ್ರಕ್ರೀಯೆಗಳು ನಡೆಯಲಿದೆ.

ಈ ಸಂದರ್ಭ ಕೋಟ ಠಾಣಾಧಿಕಾರಿ ರಾಘವೇಂದ್ರ ಅವರ ಉಪಸ್ಥಿತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಎರ್ಪಡಿಸಲಾಗಿತ್ತು. ಸ್ಥಳೀಯ ನೂರಾರು ಮಂದಿ ಉಪಸ್ಥಿತರಿದ್ದರು.

ಅನ್ಯಾಯವಾಗಿದೆ ಎನ್ನುವ ಆರೋಪ

ಈ ಸಂದರ್ಭ ಕೃಷ್ಣ ಮರಕಾಲ ಎನ್ನುವವರು ಮಾತನಾಡಿ, ನ್ಯಾಯಲಯದ ಆದೇಶವನ್ನು ಹಾಗೂ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ. ಆದರೆ ಈ ಜಾಗ ನಮ್ಮ ಪೂರ್ವಿಕರಿಂದ ನಮಗೆ ಬಂದಿದ್ದು ಎರಡು ಕುಟುಂಬಗಳು ವಾಸವಿದ್ದೇವೆ ಆದರೆ ಆಸ್ತಿ ಪಾಲು ಮಾಡಿಕೊಂಡು ರೆಕಾರ್ಡ್ ಬದಲಾವಣೆಯಾಗಿರಲಿಲ್ಲ. ಈ ನಡುವೆ ನಮ್ಮ ಕುಟುಂಬದ ಓರ್ವ ಸದಸ್ಯ ಆತನ ಮನೆ ಇರುವ ಜಾಗವನ್ನು ಬ್ಯಾಂಕ್‌ಗೆ ತೋರಿಸಿ ನಾವು ವಾಸವಿರುವ ಜಾಗದ ದಾಖಲೆಗಳನ್ನು ನೀಡಿ ಸಾಲವನ್ನು ಪಡೆದಿದ್ದಾನೆ. ನಾವು 40 ವರ್ಷದಿಂದ ಇಲ್ಲಿ ವಾಸವಿದ್ದರೂ ಸಾಲ ನೀಡುವಾಗಲೂ ವಾಸ್ತವ್ಯದ ಮೇರೆಗೆ ನಮ್ಮ ಅನುಮತಿಯನ್ನು ಕೇಳಿರಲಿಲ್ಲ ಹಾಗೂ ಕೆಲವು ವರ್ಷದ ಹಿಂದಷ್ಟೇ ನಮ್ಮ ಮನೆ, ಜಾಗದ ಮೇಲೆ ಸಾಲ ಇರುವುದು ಗಮನಕ್ಕೆ ಬಂದಿದ್ದು ಈ ಸಾಲಕ್ಕೂ ನಮಗೂ ಸಂಬಂಧವಿಲ್ಲದಿದ್ದರೂ ನಮಗೆ ಸಮಸ್ಯೆಯಾಗುತ್ತಿದೆ ಎಂದರು.

ನ್ಯಾಯಾಲಯದ ಬಗ್ಗೆ ಗೌರವವಿದ್ದು ಆದೇಶವನ್ನು ಗೌರವಿಸಿದ್ದೇವೆ. ಈ ಪ್ರಕ್ರೀಯೆಯಲ್ಲಿ ನಮಗೆ ಅನ್ಯಾಯವಾಗಿದ್ದು ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಮನೆಯವರಾದ ನಾಗೇಂದ್ರ ಪುತ್ರನ್ ತಿಳಿಸಿದರು

 

Related Articles

error: Content is protected !!