193
ಕುಂದಾಪುರ: ಕುಂದಾಪುರ ತಾಲೂಕಿನ ಸಿದ್ದಾಪುರ ಭಾಗದಲ್ಲಿ ಕಾಡಾನೆಯೊಂದು ಕಳೆದ ಎರಡು ದಿನಗಳಿಂದ ಸಂಚರಿಸುತ್ತಿರುವ ಹಿನ್ನಲೆಯಲ್ಲಿ ಇಂದು ಬುಧವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು ಬುಧವಾರ ನಡೆಯಬೇಕಾಗಿದ್ದ ವಾರದ ಸಂತೆಯನ್ನು ಮುಂಜಾಗ್ರತಾ ಕ್ರಮವಾಗಿ ರದ್ದು ಮಾಡಲಾಗಿದೆ.
ಸತತ 2 ದಿನಗಳಿಂದ ಆನೆ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಬೀಡು ಬಿಟ್ಟಿದ್ದಾರೆ. ಹೆಚ್ಚಿನ ಕಾರ್ಯಾಚರಣೆಗೆ ಕುಮ್ಮಿ ಆನೆಗಳನ್ನು ತರಿಸಿ ಸೆರೆ ಹಿಡಿಯಲು ತಯಾರಿ ನಡೆಸಲಾಗಿದೆ. ಕಂದಾಯ ಇಲಾಖೆ, ಕುಂದಾಪುರ ತಾಲೂಕು ಆಡಳಿತವು ಕಾಡಾನೆ ವಿಚಾರದಲ್ಲಿ ಸಾರ್ವಜನಿಕರು ಭಯಭೀತರಾಗದೆ ಜಾಗರೂಕತೆಯಿಂದ ಓಡಾಡಬೇಕಾಗಿ ಸೂಚನೆ ನೀಡಿದೆ.
ಉಡುಪಿ – ಶಿವಮೊಗ್ಗ ಜಿಲ್ಲೆಯ ಗಡಿ ಭಾಗವಾದ ಬಾಳೆಬರೆ ಘಾಟಿ ರಸ್ತೆಯಲ್ಲಿ ಗಂಡು ಕಾಡಾನೆ ದಾರಿತಪ್ಪಿ ರಾಜ್ಯ ಹೆದ್ದಾರಿಯಲ್ಲಿ ನಡೆದು ಮಂಗಳವಾರ ಸಂಜೆ ಕುಂದಾಪುರ ತಾಲೂಕಿನ ಹೊಸಂಗಡಿ ಕಡೆಗೆ ಬಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

