ಕಾರವಾರ : ಉತ್ತರಕನ್ನಡ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ತೆರವು ಕಾರ್ಯಾಚರಣೆ ಭಾನುವಾರ ಆರನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ, ಶಿರೂರು ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆಗೆ ಭಾನುವಾರ ಮಿಲಿಟರಿ ಪಡೆ ಆಗಮಿಸಿದೆ.
ಶಿರೂರಿನ ಭೀಕರತೆ ತಿಳಿದು ಪ್ರಧಾನಮಂತ್ರಿಗಳ ಕಾರ್ಯಾಲಯದ ಸೂಚನೆ ಹಿನ್ನೆಲೆಯಲ್ಲಿ ಗೋವಾ ಮಾರ್ಗವಾಗಿ ಮಿಲಿಟರಿ ಪಡೆ ಆಗಮಿಸಿದೆ. ಇದು ಶಿರೂರು, ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಸಲಿದೆ. ಬೆಳಗಾವಿಯಿಂದ ಮರಾಠ ಲೈಟ್ ಇನ್ವೆಂಟ್ರಿಯ ಯೋಧರು ಕಾರ್ಯಾಚರಣೆಗೆ ಆಗಮಿಸಿದ್ದಾರೆ. ಸುಮಾರು 3 ಟ್ರಕ್‌ಗಳಲ್ಲಿ 30-50 ಇನ್ವೆಂಟ್ರಿ ಯೋಧರು ಆಗಮಿಸಿದ್ದು, ಶಿರೂರಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ.
ಈಗಾಗಲೇ ಸ್ಥಳದಲ್ಲಿ ಬೀಡುಬಿಟ್ಟಿರುವ ಎನ್‌ಡಿಆರ್‌ಎಫ್, ಎಸ್ಡಿಆರ್‌ಎಫ್. ಕೇರಳದ ತಜ್ಞರ ಕಾರ್ಯಾಚರಣೆ ತಂಡದೊಂದಿಗೆ ಈ ಯೋಧರು ಕಾರ್ಯಾಚರಣೆ ನಡೆಸಲಿದ್ದಾರೆ. ಗುಡ್ಡದಿಂದ ಕುಸಿತವಾದ ಮಣ್ಣು ಮುಕ್ಕಾಲು ಭಾಗ ನದಿಗೆ ಹಾಗೂ ಕಾಲು ಭಾಗ ರಸ್ತೆಯ ಮೇಲೆ ಬಿದ್ದಿದ್ದು, ಈಗಾಗಲೇ ಹೆಚ್ಚು ಮಣ್ಣನ್ನು ತೆಗೆಯಲಾಗಿದೆ. ಈ ವೇಳೆ ಸಿಕ್ಕಿದ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ನದಿಯಲ್ಲಿ ಬಿದ್ದಿರುವ ಭಾರೀ ಪ್ರಮಾಣದ ಮಣ್ಣಿನಡಿ ಕೂಡಾ ಶೋಧ ಕಾರ್ಯ ನಡೆಸಲಾಗುತ್ತಿದೆ. ನದಿಯೊಳಗಿರುವ ಮಣ್ಣಿನ ರಾಶಿಯಲ್ಲೂ ರೇಡಾರ್ ಮೂಲಕ ಸ್ಕ್ಯಾನ್ ಮಾಡಲಾಗುತ್ತಿದೆ.