ಮಂಗಳೂರು: ಭಾನುವಾರ ಮಂಗಳೂರಿನಲ್ಲಿ ನಡೆದ ರೋಡ್ ಶೋನಲ್ಲಿ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಕರ್ನಾಟಕದ ಕರಾವಳಿ ಭಾಗ ಜನರ ಹಾಗೂ ನಮ್ಮ ಪಕ್ಷದ ನಡುವೆ ಬಲಿಷ್ಠ ಬಾಂಧವ್ಯವಿದೆ. ಉತ್ತಮ ಆಡಳಿತದ ಸಿದ್ದಾಂತ ಮತ್ತು ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಿಸುವ ಹಾಗೂ ಆಚರಿ ಸುವ ನಮ್ಮ ಪ್ರಯತ್ನಗಳಿಗೆ ಜನತೆ ನಮ್ಮನ್ನು ಹಲವು ವರ್ಷಗಳಿಂದ ಆಶೀರ್ವದಿಸಿದ್ದಾರೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮಶೀಲ ಮನೋಭಾವಕ್ಕೆ ಹೆಸರುವಾಸಿಯಾಗಿರುವ ಅನೇಕ ಜನರಿಗೆ ನಮ್ಮ ಆರ್ಥಿಕ ಸುಧಾರಣೆಗಳು ಪ್ರಯೋಜನಕಾರಿಯಾಗಿದೆ. ಕಳೆದ ದಶಕದಲ್ಲಿ ಬಂದರು ಅಭಿವೃದ್ಧಿ ಮೀನುಗಾರಿಕೆ ಮತ್ತು ಮಹಿಳಾ ಮೀನುಗಾರರ ಸಬಲೀಕರಣ, ಇಂಧನ, ಆರೋಗ್ಯ ಮತ್ತು ಇತರೆ ವಲಯಗಳನ್ನು ಕೇಂದ್ರೀಕರಿಸಿ ಕೆಲಸ ಮಾಡಲಾಗಿದೆ.. ಬಿಜೆಪಿಯ ಪ್ರಣಾಳಿಕೆ ‘ಸಂಕಲ್ಪ ಪತ್ರ’ದಲ್ಲಿ ಹೇಳಿರುವಂತೆ ಮಂಗಳೂರು ಅಭಿವೃದ್ಧಿಗಾಗಿ ನಗರಾಭಿವೃದ್ಧಿ ಮೂಲಕ ‘ಸುಗಮ’ ಜೀವನ’ ಕಲ್ಪಿಸಲಾಗುವುದು, ಮೀನುಗಾರಿಕೆಯಂತಹ ಕ್ಷೇತ್ರಗಳಲ್ಲಿ ನಿರೂಪಿಸಲಾದ ದೃಷ್ಟಿಕೋನ ಕರಾವಳಿ ಆರ್ಥಿಕತೆಯನ್ನು ಪರಿವರ್ತಿಸುತ್ತದೆ ಎಂಬುದು ನನ್ನ ನಂಬಿಕೆ ಎಂದು ಹೇಳಿದ್ದಾರೆ