ಮಂಗಳೂರು: ಕಾರ್ಯಕರ್ತರಿಗೆ ಮತ್ತಷ್ಟು ಸ್ಫೂರ್ತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ಏ.14ರಂದು ಸಂಜೆ 6.00ಕ್ಕೆ ಬೃಹತ್ ರೋಡ್ ಶೋ ನಡೆಸುವರು. ಜನರು ಇರುವಲ್ಲಿಗೆ ಸ್ವತಃ ಮೋದಿ ಬರುತ್ತಿದ್ದಾರೆ. ನಾರಾಯಣ ಗುರು ವೃತ್ತದಿಂದ ಆರಂಭಿಸಿ ನವಭಾರತ ವೃತ್ತದವರೆಗೆ ಪ್ರಧಾನಿ ಮೋದಿ ಅವರ ರೋಡ್ ಶೋ ನಡೆಯಲಿದೆ. ಅವರನ್ನು ಸ್ವಾಗತಿಸಲು ಪಕ್ಷ ಎಲ್ಲ ಸಿದ್ದತೆ ಮಾಡಿಕೊಂಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಸಂಬಂಧಿಸಿ ಇಡೀ ದೇಶದಲ್ಲಿ ಭಾರತೀಯ ಜನತಾ ಪಾರ್ಟಿಯ ಪರವಾದ ಅಲೆ ಕಾಣುತ್ತಿದೆ. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ದೇಶದ ಜನ ಬಯಸಿದ್ದಾರೆ. ಅಭಿವೃದ್ಧಿಶೀಲ ಭಾರತ ವಿಕಸಿತ ಭಾರತವಾಗಿ ರೂಪುಗೊಳ್ಳುತ್ತಿದೆ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು 3.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.
ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ, ಅಭಿವೃದ್ಧಿಪರವಾಗಿರುವ ಯೋಚನೆ ಮತ್ತು ಯೋಜನೆಗಳು, ಸಾಂಸ್ಕೃತಿಕ ಭಾರತದ ಅಭಿವೃದ್ಧಿಯನ್ನು ಜಗತ್ತಿನ ಮುಂದೆ ತೆರೆದಿಟ್ಟಿರುವುದು, ಕೋವಿಡ್ ಸಂಕಟದ ಪರಿಸ್ಥಿತಿಯಲ್ಲಿ ದೇಶವನ್ನು ಸಮರ್ಥವಾಗಿ ಮುನ್ನಡೆಸಿರುವುದು ಮೋದಿ ಮೇಲಿನ ಅಭಿಮಾನ ಹೆಚ್ಚಿಸಿದೆ. ಆರ್ಥಿಕವಾಗಿ ಭಾರತವನ್ನು ಮುನ್ನಡೆಸಿದ ಪರಿಣಾಮವಾಗಿ ಜಾಗತಿಕವಾಗಿ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ರೂಪುಗೊಂಡಿದೆ ಎಂದು ಹೇಳಿದರು.