ಬೈಂದೂರು : ಆರೋಗ್ಯ ಕಾಳಜಿ ಹಾಗೂ ರಕ್ಷಣೆಯ ಧ್ಯೇಯದೊಂದಿಗೆ ನಮ್ಮ ಕ್ಲಿನಿಕ್ ತೆರೆಯಲಾಗುತ್ತಿದ್ದು, ಗ್ರಾಮಸ್ಥರು ಹಾಗೂ ಅರ್ಹರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಭಾನುವಾರ ಉಪ್ಪುಂದ ಗ್ರಾಮದ ತಾರಪತಿ ಹಾಗೂ ತಗ್ಗರ್ಸೆ ವಸ್ರೆಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಅನೇಕ ಸೌಲಭ್ಯಗಳು ನಮ್ಮ ಬಳಿಗೆ ಬರುತ್ತಿದೆ. ಅದರ ಸದುಪಯೋಗ ಮಾಡಿಕೊಳ್ಳಬೇಕು. ವ್ಯವಸ್ಥೆಯನ್ನು ಒದಗಿಸುವುದು ಎಷ್ಟು ಮುಖ್ಯವೋ ಅದನ್ನು ಅಷ್ಟೇ ಚೆನ್ನಾಗಿ ಬಳಸಿಕೊಳ್ಳುವುದು ಅವಶ್ಯಕ ಎಂದು ಹೇಳಿದರು. ನಮ್ಮ ಕ್ಲಿನಿಕ್‌ನಿಂದ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರಯೋಜನೆ ಆಗಬೇಕು. ಇಡೀ ಊರಿಗೆ ಅದು ಮಾದರಿಯಾಗಬೇಕು. ಆರೋಗ್ಯದ ಕಾಳಜಿ ಹಾಗೂ ಆರೋಗ್ಯದ ರಕ್ಷಣೆಯೊಂದಿಗೆ ಆರಂಭವಾದ ಈ ಸೇವೆ ಹೀಗೆ ಮುಂದುವರಿಯಬೇಕು ಎಂದು ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದ ನಮ್ಮ ಕ್ಲಿನಿಕ್ ತೆರೆಯಲು ಸಹಕರಿಸಿದ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ವಂದನೆಗಳು. ನಮ್ಮ ಕ್ಲಿನಿಕ್ ಮೂಲಕ ಜನ ಸಾಮಾನ್ಯರಿಗೆ ಉತ್ತಮ ಸೇವೆ ಸಿಗುವಂತಾಗಲಿ ಎಂದು ಆಶಿಸಿದರು.

ನಮ್ಮ ಕ್ಲಿನಿಕ್ ನಲ್ಲಿ ಲಭ್ಯ ಸೇವೆ
ನಮ್ಮ ಕ್ಲಿನಿಕ್‌ನಲ್ಲಿ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳ 12 ಪ್ಯಾಕೇಜ್ ಸೇವೆಗಳು ಲಭ್ಯವಿರಲಿದೆ. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಮತ್ತು ಶಿಶುವಿನ ಸಮಗ್ರ ಆರೋಗ್ಯ ಆರೈಕೆ, ಬಾಲ್ಯ ಮತ್ತು ಹದಿಹರೆಯದವರ ಸಮಗ್ರ ಆರೋಗ್ಯ ಸೇವೆಗಳು, ಸಾರ್ವತ್ರಿಕ ಲಸಿಕಾಕರಣ ಸೇವೆಗಳು, ಕುಟುಂಬ ಕಲ್ಯಾಣ, ಗರ್ಭನಿರೋಧಕ ಸೇವೆಗಳು ಮತ್ತು ಇತರ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಖಾಯಿಲೆಗಳಿಗೆ ಹೊರರೋಗಿ ಸೇವೆಗಳು,
ಸಾಂಕ್ರಾಮಿಕ (ಟಿ.ಬಿ. ಕುಷ್ಠ ಇತ್ಯಾದಿ) ಮತ್ತು ಅಸಾಂಕ್ರಾಮಿಕ ರೋಗಗಳ (ಮಧುಮೇಹ, ಹೆಚ್ಚು ರಕ್ತದೊತ್ತಡ, ದೀರ್ಘಾವಧಿ ಶ್ವಾಸಕೋಶ ಕಾಯಿಲೆ, ಕೀಲು ನೋವು ಮತ್ತು ಸಂಧಿವಾತ, ಬಾಯಿ, ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್ ಇತ್ಯಾದಿ) ಸ್ಕ್ರೀನಿಂಗ್, ತಡೆಗಟ್ಟುವಿಕೆ ಮತ್ತು ನಿರ್ವಹಣೆ, ಮೂಲಭೂತ ಆರೋಗ್ಯ ಸೇವೆಗಳು, ಮೂಲಭೂತ ನೇತ್ರ ಹಾಗೂ ಕಿವಿ, ಮೂಗು, ಗಂಟಲು ಆರೋಗ್ಯ ಆರೈಕೆ ಸೇವೆಗಳು, ಮಾನಸಿಕ ಆರೋಗ್ಯದ ಮೂಲಭೂತ ಸ್ಕ್ರೀನಿಂಗ್ ಸೇವೆಗಳು, ಮೂಲಭೂತ ವೃದ್ಧಾಪ್ಯ ಆರೈಕೆ ಮತ್ತು ಉಪಶಮನಕಾರಿ ಆರೈಕೆ ಸೇವೆಗಳು, ಸುಟ್ಟ ಗಾಯಗಳು, ಅಪಘಾತ, ಮತ್ತಿತರ ಗಾಯಗಳು ಸೇರಿದಂತೆ ತುರ್ತು ವೈದ್ಯಕೀಯ ಸೇವೆಗಳು ಸಾರ್ವಜನಿಕರಿಗೆ ದೊರೆಯಲಿದೆ.

