ಉಡುಪಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಭಾರತ ಲಕ್ಷ್ಮೀ ಬಿರುದು ನೀಡಿ ಸನ್ಮಾನಿಸಿದರು.
ಪರ್ಯಾಯ ಪುತ್ತಿಗೆ ಮಠದಿಂದ ಕೃಷ್ಣಮಠದ ಮೇಲಂತಸ್ತಿನ ಪೌಳಿಗೆ ನೂತನ ಕಾಷ್ಟ ಯಾಳಿ ಅಲಂಕಾರವನ್ನು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು. ನಂತರ ರಾಜಾಂಗಣದಲ್ಲಿ ನಡೆದ ಸಭೆಯಲ್ಲಿ ಅವರನ್ನು ಪುತ್ತಿಗೆ ಮಠಾಧೀಶರು, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು ಮತ್ತು ಪುತ್ತಿಗೆ ಕಿರಿಯ ಪಟ್ಟದ ಶ್ರೀ ಸುಂದ್ರ ತೀರ್ಥರು ಸನ್ಮಾನಿಸಿದರು.
ಈ ಸಂದರ್ಭ ಸಚಿವೆ, ವೇದಿಕೆಯಲ್ಲಿ ಭಾರೀ ಕಡೆಗೋಲಿನ ಮೂಲಕ ಸಾಂಕೇತಿಕವಾಗಿ ಮಜ್ಜಿಗೆ ಕಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಭಾರತ ಇಂದು ಅನೇಕೆ ಸವಾಲುಗಳನ್ನು ಎದುರಿಸುತ್ತಿದೆ, ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಂತರು ಪ್ರಾರ್ಥನೆ ಮೂಲಕ ಬೆಂಬಲ ನೀಡಬೇಕು ಎಂದು ಮಠಾಧೀಶರಲ್ಲಿ ವಿನಂತಿಸಿದರು.
ದೇಶದ ಮೇಲೆ ಯುವಜನತೆ ಭಾರಿ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಅವರಿಗಾಗಿ ದೇಶವನ್ನು ಸಮೃದ್ಧಗೊಳಿಸಬೇಕಾಗಿದೆ. ಭಾರತವನ್ನು ನಾವು ದೇವಿ, ಮಾತೆ ಎಂದು ಪೂಜಿಸುತ್ತೇವೆ. ಅಂತಹ ಭಾರತ ಎಲ್ಲರ ಹೃದಯದಲ್ಲಿ ಸ್ಥಾಪನೆಯಾಗಬೇಕು. ಈ ದೇಶದ ಸಮೃದ್ಧಿಗಾಗಿ, ಯುವಜನತೆಯ ನಿರೀಕ್ಷೆಗಳಿಗಾಗಿ ಸಂತರು, ಪೂಜ್ಯರು ದೇವರಲ್ಲಿ ಪ್ರಾರ್ಥಿಸಬೇಕು ಎಂದವರು ಕೈಮುಗಿದು ವೇದಿಕೆಯಲ್ಲಿದ್ದ ಶ್ರೀಪಾದರಲ್ಲಿ ಕೋರಿದರು.
ತಾನು 2005ರಲ್ಲಿ ಕೃಷ್ಣಮಠಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದೆ. ಇದರಿಂದ ನನ್ನ ಜೀವನದಲ್ಲಿ ಹಿತವಾದ ದಿನಗಳು ಬಂದಿವೆ. ನಂತರವೂ ನನ್ನ ಕುಟುಂಬಸ್ಥರು ನಿರಂತರವಾಗಿ ಕೃಷ್ಣಮಠದ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದವರು ಗದ್ಗದಿತರಾಗಿ ನುಡಿದರು.
ಕೃಷ್ಣಮಠದಲ್ಲಿ ಸೇವೆಯ ಸಂಸ್ಕೃತಿ ಜೀವಂತವಾಗಿದೆ. ಪುತ್ತಿಗೆ ಶ್ರೀಗಳು ಸಂದೇಶವನ್ನು ಹರಡುವ ಕೆಲಸ ಯಜ್ಞದಂತೆ ನಡೆಸುತ್ತಿದ್ದಾರೆ, ಇದು ದೇವರ ಅಸಾಮಾನ್ಯ ಸೇವೆಯಾಗಿದೆ ಎಂದವರು ಹೇಳಿದರು.
ಇದೇ ಸಂದರ್ಭದಲ್ಲಿ ಪರ್ಯಾಯ ಶ್ರೀಗಳು ಇನ್ಫೋಸಿಸ್‌ನ ಸುಧಾ ನಾರಾಯಣಮೂರ್ತಿ, ಚೆನ್ನೈನ ಉದ್ಯಮಿ ರವಿ ಸ್ಯಾಮ್, ಹೈಕೋರ್ಚಿನ ನಿವೃತ್ತ ನ್ಯಾಯಮೂರ್ತಿ, ಯಮೂರ್ತಿ ದಿನೇಶ್ ಕುಮಾರ್ ಅವರಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು

