ಮಂಗಳೂರು : ಕಾವೂರು ಠಾಣಾ ವ್ಯಾಪ್ತಿಯ ಅಂಬಿಕಾ ನಗರ ನಿವಾಸಿ, 35 ವರ್ಷದ ರಾಜೇಶ್ ಪಣಂಬೂರು ಬೀಚ್‌ಗೆ ತೆರಳಿದ್ದರು. ಸಮುದ್ರ ತೀರದಲ್ಲಿ ಮಗುವಿನೊಂದಿಗೆ “ನಾವಿಬ್ಬರೂ ಸಾಯೋಣ” ಎಂದು ಹೇಳುತ್ತಾ ವಿಡಿಯೋವೊಂದನ್ನು ಚಿತ್ರೀಕರಿಸಿದ್ದರು. ಈ ವಿಡಿಯೋ ಪಣಂಬೂರು ಪೊಲೀಸರ ಗಮನಕ್ಕೆ ಬಂದ ತಕ್ಷಣ, ಅವರು ಬೀಚ್‌ನಾದ್ಯಂತ ತಂದೆ ಮತ್ತು ಮಗಳಿಗಾಗಿ ತೀವ್ರ ಶೋಧ ನಡೆಸಿದರು. ಆದರೆ, ಅಲ್ಲಿ ಅವರು ಪತ್ತೆಯಾಗದ ಕಾರಣ, ಪೊಲೀಸರು ರಾಜೇಶ್ ಅವರ ಮನೆಯ ವಿಳಾಸವನ್ನು ಪತ್ತೆಹಚ್ಚಿ, ಅದರತ್ತ ಧಾವಿಸಿದರು. ಪೊಲೀಸರ ಸಮಯಪ್ರಜ್ಞೆಯಿಂದಾಗಿ ಎರಡು ಅಮೂಲ್ಯ ಜೀವಗಳು ಪವಾಡಸದೃಶವಾಗಿ ಉಳಿದಿವೆ. ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ತಂದೆ ಮತ್ತು ಮಗಳಿಬ್ಬರೂ ಅಪಾಯದಿಂದ ಪಾರಾಗಿದ್ದಾರೆ.
ಪೊಲೀಸರು ರಾಜೇಶ್ ಅವರ ಮನೆಗೆ ತಲುಪಿದಾಗ, ಅವರು ತಮ್ಮ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದರು. ನೇಣು ಹಾಕಿಕೊಳ್ಳಲು ಸಿದ್ಧವಾಗುತ್ತಿದ್ದ ಕ್ಷಣದಲ್ಲೇ, ಪೊಲೀಸ್ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬಾಗಿಲನ್ನು ಒಡೆದು ಒಳನುಗ್ಗಿದರು. ರಾಜೇಶ್ ಮತ್ತು ಅವರ ಪುತ್ರಿಯನ್ನು ಯಶಸ್ವಿಯಾಗಿ ರಕ್ಷಿಸಲಾಯಿತು. ಬಳಿಕ, ಇಬ್ಬರನ್ನೂ ಕಾವೂರು ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ಪೊಲೀಸರು ರಾಜೇಶ್‌ಗೆ ಸೂಕ್ತ ಸಮಾಧಾನಪಡಿಸಿ, ತಿಳುವಳಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ

