ಕೋಟ : ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಚಿತ್ರಪಾಡಿ ನಂದಿಕೇಶ್ವರ ರಸ್ತೆಯ ಖಾಸಗಿ ಕಾಂಪ್ಲೆಕ್ಸನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ನೂರಾರು ಜನರಿಗೆ ವಾಸ್ತವ್ಯಕ್ಕೆ ವಸತಿ ಗೃಹ ನೀಡಲಾಗಿದ್ದು ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎನ್ನುವ ಸ್ಥಳೀಯರ ದೂರಿನ ಮೇರೆಗೆ ಪ.ಪಂ. ಮುಖ್ಯಾಧಿಕಾರಿ ಅಜಯ ಭಂಡಾರ್ಕರ್ ಅವರು ಸ್ಥಳ ಪರಿಶೀಲನೆ ನಡೆಸಿ ಕಾಂಪ್ಲೆಕ್ಸ್ನ ಮಾಲಕರಿಗೆ ನೋಟೀಸ್ ನೀಡಿದರು.
ಈ ವಸತಿಗೃಹದಲ್ಲಿ ಕೊಳಚೆ ನೀರನ್ನು ಸಾರ್ವಜನಿಕ ಮಳೆ ನೀರು ಹರಿದು ಹೋಗುವ ಚರಂಡಿಗೆ ಸಂಪರ್ಕ ಮಾಡಿದ್ದು ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ ಹಾಗೂ ವಸತಿಗೃಹದಲ್ಲಿ ನೂರಾರು ಮಂದಿಗೆ ಯಾವುದೇ ಸೌಲಭ್ಯಗಳಿಲ್ಲದೆ ವಸತಿಗೆ ಅವಕಾಶ ನೀಡಿರುವುದರಿಂದ ಸ್ಥಳೀಯರ ಶಾಂತ ವಾತವರ್ಣಕ್ಕೆ ಸಮಸ್ಯೆಯಾಗುತ್ತಿದೆ ಎಂದು ಪ.ಪಂ.ಗೆ ಸ್ಥಳೀಯರು ದೂರು ನೀಡಿದ್ದರು.
ಈ ಕುರಿತು ಪರಿಶೀಲನೆ ನಡೆಸಿದ ಮುಖ್ಯಾಧಿಕಾರಿಗಳು ವಸತಿ ಗೃಹಕ್ಕೆ ಕಾನೂನು ನಿಯಮಗಳನ್ನು ಪಾಲಿಸಬೇಕು ಹಾಗೂ ಚರಂಡಿಗೆ ಸಂಪರ್ಕಿಸಿದ ಅಕ್ರಮ ಕೊಳಚೆ ನೀರಿಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಕಾನೂನು ಕ್ರಮಕೈಗೊಳ್ಳುವುದಾಗಿ ನೋಟೀಸು ನೀಡಿದ್ದಾರೆ. ಪ.ಪಂ. ಅಧ್ಯಕ್ಷೆಸುಕನ್ಯಾ ಶೆಟ್ಟಿ ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಕಿರಿಯ ಆರೋಗ್ಯ ನಿರೀಕ್ಷಕಿ ಮಮತಾ ಇದ್ದರು.