ಭಾಷೆ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಸಾಧನ. ಅನೇಕ ಶತಮಾನಗಳ ಗತವೈಭವ ಸಾರುವಂತಹ ನಮ್ಮ ನಾಡು-ನುಡಿಯನ್ನು ಉಳಿಸುವ ಕಾಯಕದಲ್ಲಿ ಯುವ ಜನತೆ ರಾಯಭಾರಿಗಳಾಗಬೇಕು. ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ರಾಜ್ಯೋತ್ಸವ ಕೇವಲ ಒಂದು ದಿನದ ಉತ್ಸವ ಆಗದೆ ವರ್ಷ ಪೂರ್ತಿ ಕನ್ನಡದ ಕಂಪನ್ನು ಪಸರಿಸುವ ನಿತ್ಯೋತ್ಸವವಾಗಬೇಕು. ವಿದ್ಯಾರ್ಥಿ ಸಮೂಹ ಕನ್ನಡದ ಮೇಲೆ ಪ್ರೀತಿ ಅಭಿಮಾನವನ್ನು ಬೆಳೆಸಿಕೊಂಡು ಕನ್ನಡ ಯಾವ ಭಾಷೆಗೂ ಕಡಿಮೆಯಲ್ಲ ಎಂಬುದನ್ನು ನಿರೂಪಿಸಬೇಕೆಂದು ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಗಣೇಶ್ ಪೈ ಎಂ. ಹೇಳಿದರು.
ಅವರು ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕೋಟೇಶ್ವರ ಇಲ್ಲಿ ಐಕ್ಯೂಎಸಿ ಮತ್ತು ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ “ಕರ್ನಾಟಕ ಅಂದು – ಇಂದು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ಧ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಇವರು ಹೊಸ ತಲೆಮಾರು ಬದಲಾಗುತ್ತಿರುವ ಸಾಮಾಜಿಕ ಸ್ಥಿತ್ಯಂತರಗಳಿಗೆ ಅನುಗುಣವಾಗಿ ತಮ್ಮನ್ನು ಪರಿವರ್ತಿಸಿಕೊಂಡು ಸಾಂಸ್ಕೃತಿಕವಾಗಿ ಸಿರಿವಂತರಾಗಬೇಕೆAದು ಹಿತನುಡಿದರು. ಐಕ್ಯೂಎಸಿ ಸಂಚಾಲಕ ನಾಗರಾಜ ಯು ತೋರ್ಪಡಿಕೆಯ ಭಾಷಾಭಿಮಾನಿಗಳಾಗದೆ ನಿಜದ ನೆಲೆಯಲ್ಲಿ ವ್ಯವಹರಿಸಬೇಕೆಂದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ. ಪ್ರಸ್ತಾವಿಸಿ ಸ್ವಾಗತಿಸಿದರು. ಕೃತಿಕಾ ನಿರೂಪಿಸಿ, ಕನ್ನಡ ಸಂಘದ ಕಾರ್ಯದರ್ಶಿ ರಶ್ಮಿ ಉಡುಪ ವಂದಿಸಿದರು. ನಂತರ ನಡೆದ ಕನ್ನಡ ಗೀತೆ ಗುಂಪು ಗಾಯನ ಸ್ಪರ್ಧೆಯಲ್ಲಿ ಅಮೃತಾ ಪ್ರಥಮ ಎಂ.ಕಾA., ವೈಷ್ಣವಿ ತೃತೀಯ ಬಿ.ಸಿ.ಎ. ಮತ್ತು ನಿಸರ್ಗ ಪ್ರಥಮ ಬಿ.ಎ. ತಂಡದವರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ತಂಡ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

